ಮದುವೆಯಾಗಿ ಎರಡು ಮಕ್ಕಳಿದ್ದರೂ ತನಗಿಂತ ಕಿರಿಯ ವಯಸ್ಸಿನ ಹಾಗೂ ವಿವಾಹಿತ ವ್ಯಕ್ತಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತಮ್ಮ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಬೂದಗುಂಪ ನಿವಾಸಿ ದ್ಯಾಮಣ್ಣ ವಜ್ರಬಂಡಿ ಮೃತ ದುರ್ದೈವಿ.
ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ ಎಲ್ ಅರಸಿದ್ದಿ ಪತ್ರಿಕಾಗೋಷ್ಠಿ ಕರೆದು, ಕೊಲೆ ಮಾಡಿ ಗುರುತು ಸಿಗದ ರೀತಿಯಲ್ಲಿ ಮೃತದೇಹ ಸುಟ್ಟು ಹಾಕಿದ ಹಾಗೂ ಮೃತ ವ್ಯಕ್ತಿಯ ಹೆಸರು ವಿಳಾಸದ ಮಾಹಿತಿಯೇ ಇಲ್ಲದ ಕೊಲೆ ಪ್ರಕರಣವನ್ನು ಘಟನೆ ನಡೆದ ನಾಲ್ಕೇ ದಿನಗಳಲ್ಲಿ ಭೇದಿಸಿ ಕೊಲೆಯ ತನಿಖೆ ನಡೆಸಿ ಇಬ್ಬರನ್ನು ಬಂಧಿಸಲು ಯಶಸ್ವಿಯಾದ ಕುರಿತು ಮಾಹಿತಿ ವಿವರಿಸಿದರು.
ಕೊಪ್ಪಳ ತಾಲೂಕಿನ ಮುನಿರಾಬಾದ್ ವ್ಯಾಪ್ತಿಯ ಕೂಕನಹಳ್ಳಿ ಹೊರವಲಯದಲ್ಲಿ 30 ವರ್ಷದ ಆಸುಪಾಸಿನ ಯುವಕನನ್ನು ಮಾರಕಾಸ್ತ್ರಗಳಿಂದ ಕೊಂದು, ಶವ ಗುರುತು ಸಿಗದಲಾರದಂತೆ ಸುಟ್ಟು ಹಾಕಲಾಗಿತ್ತು. ಗಂಗಪ್ಪ ನಾಯಕ ಕೆಂಚನದೋಣಿ ತಾಂಡಾರವರು ನೀಡಿದ ದೂರಿನನ್ವಯ ಮುನಿರಾಬಾದ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಭೇದಿಸಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹೇಮಂತ್‌ಕುಮಾರ ಆರ್, ಉಪ-ವಿಭಾಗಾಧಿಕಾರಿ ಮುತ್ತಣ ಸರವಗೋಳ ಅವರನ್ನೊಳಗೊಂಡ ವಿಶೇಷ ತನಿಖಾ ರಚಿಸಲಾಗಿತ್ತು. ತಂಡವು ಮೃತ ವ್ಯಕ್ತಿಯ ವಿಳಾಸ, ಮೃತನ ವಾರಸುದಾರರನ್ನು ಮತ್ತು ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡುವ ಕುರಿತು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಮಾಹಿತಿ ಸಂಗ್ರಹಿಸಿತು. ಮಾಹಿತಿ ಆಧಾರದ ಮೇಲೆ ಶಂಕಿತ ವ್ಯಕ್ತಿಗಳಾದ ಕಾಮನೂರಿನ ಲಾರಿ ಡ್ರೈವರ್ ಸೋಮಪ್ಪ (35) ಹಾಗೂ ಕೊಲೆಯಾದ ವ್ಯಕ್ತಿಯ ಪತ್ನಿ ನೇತ್ರಾವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಹೋಂಡಾ ಯೂನಿಕಾರ್ನ್ ವಾಹನವನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಕೊಪ್ಪಳ | ವೈದಿಕ ಪರಂಪರೆ ಮೌಲ್ಯಗಳ ನೆಪದಲ್ಲಿ ಮೌಢ್ಯ ಹೇರುತ್ತಿದೆ: ರಾಮಚಂದ್ರಪ್ಪ
ಕೊಲೆ ಆರೋಪಿಗಳು ಮದುವೆ ಪೂರ್ವದಲ್ಲೇ ಸಂಬಂಧ ಹೊಂದಿದ್ದು, ಅದು ಮದವೆ ನಂತರವೂ ಮುಂದುವರೆದಿದೆ. ಇದರಿಂದ ಗಂಡ ಸಂಶಯ ಪಟ್ಟು ನಿತ್ಯ ಕಿರುಕುಳ ನಿಡುತ್ತಿದ್ದನೆಂದು ಪೊಲೀಸ್ ತನಿಖೆಯಲ್ಲಿ ಆರೋಪಿ ನೇತ್ರಾವತಿ ತಿಳಿಸಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ತಾವೇ ಕೊಲೆ ಮಾಡಿದ್ದೆಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.