ಬಲ್ಡೋಟಾ ಕೈಗಾರಿಕಾ ಕಾರ್ಖಾನೆಯ ವಿಸ್ತರಣೆಯ ವಿರೋಧಿ ಹೋರಾಟದ ಸಭೆಯನ್ನು ಶನಿವಾರ ಕರೆಯಲಾಗಿತ್ತು. ಈ ಸಭೆಗೆ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೂ ಕಾದರೂ ಬಾರದ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಡೆಯನ್ನು ಕಂಡು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಷಣಾ ವೇದಿಕೆ ಕೊಪ್ಪಳ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಶಾಸಕರ ಜೊತೆ ಬಿಎಸ್‌ಪಿಎಲ್, ಎಮ್‌ಎಸ್‌ಪಿಎಲ್ ಕಂಪನಿಗಳ ವಿರೋಧಿಸಿ ಹಾಗೂ ಬಲ್ಡೋಟಾ ಕಂಪನಿಯಲ್ಲಿ ಕಾರ್ಯಚಟುವಟಿಕೆಗಳು ಸದ್ದಿಲ್ಲದೆ ನಡೆದಿದ್ದು, ಅದರ ಶಾಸಕರ ಜೊತೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಹಾಗೂ ಚರ್ಚೆ ನಡೆಸಬೇಕಿತ್ತು, ಆದರೆ, ಶಾಸಕ ರಾಘವೇಂದ್ರ ಹಿಟ್ನಾಳರವರು ಮಾತು ತಪ್ಪಿದ್ದರಿಂದ ಚಳುವಳಿಗಾರರು ಆಕ್ರೋಶಿತರಾಗಿ ಸಭೆ ಮೊಟಕುಗೊಳಿಸಿದರು.
ಕೆಲವು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೆದಿಕೆ ವತಿಯಿಂದ ಸಭೆ ನಡೆಸಿ ‘ಬಲ್ಡೋಟಾ ಕಾರ್ಖಾನೆ ತೊಲಗುವವರೆಗೂ ಹೋರಾಟ ನಿಲ್ಲಿಸಬಾರದು. ನಿಮ್ಮ ಜೊತೆ ನಾವು ಇದ್ದೇವೆ ಹಾಗೂ ಸರಕಾರವೂ ಇದೆ’ ಎಂದು ಚಳುವಳಿಗಾರರಲ್ಲಿ ಧೈರ್ಯ ತುಂಬಿದ್ದರು.

ಶಾಸಕ ರಾಘವೇಂದ್ರ ಹಿಟ್ನಾಳ ಬರತೇನಿ ಎಂದು ಹೇಳಿ ಪ್ರಗತಿಪರರನ್ನ, ಸಾಹಿತಿಗಳನ್ನ, ಪರಿಸರವಾದಿಗಳನ್ನ ಹಾಗೂ ಹೋರಾಟಗಾರರನ್ನ ಕಾಯಿಸಿದ್ದು ಯಾಕೆ? ಎಂಬ ಪ್ರಶ್ನೆ ಹೋರಾಟಗಾರರಲ್ಲಿ ಉದ್ಭವಿಸಿದೆ. ಶಾಸಕರು ಒತ್ತಡಕ್ಕೇನಾದರೂ ಒಳಗಾಗಿದ್ದಾರೆಯೇ? ಉದ್ದೇಶಪೂರ್ವಕವಾಗಿ ಕಾಯಿಸಿದರೆ? ಜಂಟಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಬಲ್ಡೋಟಾ ಕಂಪನಿ ಚರ್ಚಿಸಲು ಶಾಸಕರೇ ನಗರದ ಪ್ರವಾಸಿ ಮಂದಿರದಲ್ಲಿ ಸಭೆಗೆ ಸಮಯ ನಿಗದಿ ಮಾಡಿ ಗೈರಾಗಿದ್ದು ಯಾಕೆ ಎಂದು ಪ್ರಶ್ನಿಸಿ, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಬಸವರಾಜ್ ಶೀಲವಂತರ ಮಾತನಾಡಿ, “ಶಾಸಕರೇ ಬಲ್ಡೋಟಾ ವಿರೋಧಿ ಹೋರಾಟ ಕ್ರಿಯಾ ಸಮಿತಿ ಸಭೆಗೆ ಸಮಯ ಹಾಗೂ ಸ್ಥಳ ನಿಗದಿ ಮಾಡಿ ಮಧ್ಯಾಹ್ನ 3 ಗಂಟೆಯವರೆಗೂ ನಮ್ಮನ್ನು ಕಾಯಿಸಿ ಕೊನೆಗೂ ಬರಲಿಲ್ಲ ಎಂದರೆ, ಈ ಕಂಪನಿ ವಿಸ್ತರಣೆ ವಿರೋಧಿ ಸಭೆಗೆ ಹಾಜರಾಗದಂತೆ ಅವರಿಗೆ ಒತ್ತಡ ಬಂದಿರಬಹುದು” ಎಂದು ಸಂಶಯ ವ್ಯಕ್ತಪಡಿಸಿ ಆಕ್ರೋಶಿತರಾದರು.
ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಶಾಸಕರಿಗೆ ಸಮಯ ಪ್ರಜ್ಞೆ ಇಲ್ಲದಿರುವುದು ತುಂಬಾ ನೋವು ತರಿಸಿದೆ. ಅವರೇ ಸಮಯ ಕೊಟ್ಟು ನಿಗದಿ ಮಾಡಿ; ‘ಅರ್ಧ ಗಂಟೆಯಲ್ಲಿ ಬರುತ್ತೇನೆ’ ಎಂದು ಹೇಳಿ ಕೊನೆಗೆ ನಮ್ಮ ಕರೆಯನ್ನೂ ಸ್ವೀಕರಿಸದೇ ಕಾಯಿಸಿದರು. ಶಾಸಕರ ಈ ನಡೆಯನ್ನು ಕಂಡರೆ ಕೊಪ್ಪಳ ಜನರಲ್ಲಿ ಸಂಶಯ ಮೂಡುತ್ತಿದೆ ಅವರು ಕಂಪನಿಯ ಪರವಾಗಿ ಒಳಗೊಳಗೇ ಇದ್ದಾರೆ” ಎಂದು ಶಾಸಕರ ವಿರುದ್ಧ ಗುಡುಗಿದರು.
ಶಿವಪ್ಪ ಹಡಪದ, ಕೆ.ಬಿ.ಗೋನಾಳ, ಗಾಳೆಪ್ಪ, ಗವಿಸಿದ್ದಪ್ಪ, ಶರಣು ಪಾಟೀಲ್, ಮುದಕಪ್ಪ ಹೊಸಮನಿ, ಈಶ್ವರ ಹತ್ತಿ, ಮಹಾಂತೇಶ ಕೊತಬಾಳ, ರವಿ ಕಾಂತಣ್ಣವರ, ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಿಲ್ಲಾ ಬಚಾವೋ ಆಂದೋಲನದ ಸರ್ವಸದಸ್ಯರು ಈ ಸಭೆಗೆ ಬಂದಿದ್ದರು.
