ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಪ್ರಬಲ ಶಕ್ತಿಗಳು ಜನರ ಬದುಕನ್ನು ಸರ್ವನಾಶ ಮಾಡಿ ಇಡೀ ದೇಶವನ್ನೇ ಕೊಳ್ಳೆ ಹೊಡೆದು ಬಂಡವಾಳಶಾಹಿಗಳಿಗೆ ದೇಶ ಮಾರುತ್ತಿದ್ದಾರೆ. ಇದನ್ನು ತಡೆಯುವುದಕ್ಕೆ ಗಟ್ಟಿ ಗೋಡೆಯಾಗಿ ನಿಲ್ಲಬೇಕು ಎಂದು ಕರ್ನಾಟಕ ಜನಶಕ್ತಿ ರಾಜ್ಯ ಮುಖಂಡ ನೂರ್ ಶ್ರೀಧರ್ ಹೇಳಿದರು.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಕಲ್ಯಾಣಮಂಟಪದಲ್ಲಿ ಎದ್ದೇಳು ಕರ್ನಾಟಕದಿದಂದ ಆಯೋಜಿಸಲಾಗಿದ್ದ ಎರಡು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
“ಭವಿಷ್ಯದ ಸಾಮರಸ್ಯ ಸದೃಢ ಭಾರತಕ್ಕಾಗಿ, ದೇಶದ ಸಂವಿಧಾನದ ರಕ್ಷಣೆಗಾಗಿ, ತಳಮಟ್ಟದಲ್ಲಿ ಶ್ರಮಿಸಲು ಸಿದ್ಧರಿರುವ ದೇಶಪ್ರೇಮಿ ಕಾರ್ಯಕರ್ತರಿಗೆ “ವಿಶೇಷ ಯೋಜನಾ ಕಾರ್ಯಗಾರ” ನಡೆಸಲಾಯಿತು. ನಾವು ಎಲ್ಲರೂ ಒಟ್ಟಾಗಿ ಪ್ರಬುದ್ಧ ಭಾರತ ಕಟ್ಟಬೇಕಾಗಿದೆ” ಎಂದು ಯುವಜನತೆಗೆ ಸಲಹೆ ನೀಡಿದರು.
“ಪ್ರಸ್ತುತ ದಿನಮಾನಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮುಂದಿನ 2027ರ ಚುನಾವಣೆಯು ರಕ್ತಸಿಕ್ತ ರಾಜಕಾರಣಕ್ಕೆ ತಯಾರಿ ನಡೆಸಿದ್ದಾರೆ. ಈ ಸಂಚು ಜನಚಳವಳಿಗಳ ಮೇಲೆಯೂ ನಡೆಯುವ ಹುನ್ನಾರ. ಒಂದು ಮಾರಣಹೋಮ ಮಾಡಲು ಸಂಚು ನಡೆಸಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
“ಈ ದೇಶವನ್ನು, ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ರಕ್ಷಿಸುವಂತೆ ಸಂದರ್ಭದಲ್ಲಿ ಹೊಸಯಾನ, ಹೊಸ ಪ್ರಯೋಗವನ್ನು ನಾಗರಿಕ ಸಮಾಜ ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಬೃಹತ್ತಾದ ಯೋಜನೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಮತ್ತು ಅವಶ್ಯಕವಾಗಿದೆ” ಎಂದರು.
ಮತ್ತೋರ್ವ ವೆಂಕಟೇಶ ಪ್ರಸಾದ ಮಾತನಾಡಿ, “ಚುನಾವಣೆ ಒಂದು ನೀತಿ ಮಾತ್ರ. ಇವತ್ತು ಎರಡು ಉದ್ದೇಶ ಇಟ್ಟುಕೊಂಡು ಈ ಕಾರ್ಯಗಾರ ಆಯೋಜಿಸಲಾಗಿದೆ. ಒಂದು 2027ರ ಚುನಾವಣೆಗೆ ಒಂದು ನೀಲಿ ನಕ್ಷೆ ಕ್ರೋಢೀಕರಣ ಮಾಡುವುದು, ಇನ್ನೊಂದು ಈ ಕನಸುಗಳನ್ನು ಸಾಕಾರಗೊಳಿಸಲು ಯಾವ ರೀತಿ ಚಟುವಟಿಕೆಯಲ್ಲಿ ತೊಡಗಬೇಕು, ಚರ್ಚಿಸಲು ಸೇರಿದ್ದೆವೆ. ನಮ್ಮ ಒಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಬಲಿಷ್ಠವಾಗಿ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸಂಘಟನೆಗಳೊಂದಿಗೆ ವ್ಯವಸ್ಥಿತವಾಗಿ ರೂಢಿಸಿಕೊಳ್ಳಬೇಕಿದೆ ಎಂದರು.
ಕೆ ಎಲ್ ಅಶೋಕ ಮಾತನಾಡಿ, “ಮೂರು ವರ್ಷದ ಹಿಂದಿನ ರಾಜಕೀಯ ನೋಡಿದರೆ ಮೋದಿ-ಅದಾನಿ ಬೆಟಾಲಿಯನ್, ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲವೆಂಬ ಕಾಲಘಟ್ಟದಲ್ಲಿ ಇದ್ದಾಗ ʼಎದ್ದೆಳು ಕರ್ನಾಟಕʼ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಸವಾಲಾಗಿ ಸ್ವೀಕರಿಸಿ ಗೆದ್ದೇಗೆಲ್ಲುವೆವೆಂದು ಧೃತಿಗೆಡದೆ ದೃಢವಾಗಿ ನಿಂತೆವು. ವೈಜ್ಞಾನಿಕವಾಗಿ ರೂಪುರೇಷೆ ಹಾಕಿಕೊಂಡು ಇವರ ಸೊಕ್ಕು ಅಡಗಿಸಲು ಮತ್ತು ಈ ಶಕ್ತಿಗಳನ್ನು ಸೋಲಿಸುವಲ್ಲಿ ಯಶಸ್ವಿಯಾದೆವು” ಎಂದು ಹೇಳಿದರು.
“ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಮೂಲ ಆಶಯ ಮತ್ತು ಅಜೆಂಡಾ ಈಡೇರಿಸಲು ಆಗಿಲ್ಲ. ಮುಂದೆಯೂ ಸಾವಿರ ವರ್ಷವಾದರೂ ಅವರ ಆಶಯ ಈಡೇರಲು ಬಿಡಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ವಕ್ಫ್ ತಿದ್ದುಪಡಿ, ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ರೈತರ ಒತ್ತಾಯ
ಇಂದ್ರಮ್ಮ ಚಿಕ್ಕನಾಯಕನಹಳ್ಳಿ ಮಾತನಾಡಿ, “ಕಳೆದ ಚುನಾವಣೆಯಲ್ಲಿ ಎದ್ದೆಳು ಕರ್ನಾಟಕದ ಮೂಲಕ ನಾವು ಸರ್ವಾಧಿಕಾರಿ ನಾಯಕರನ್ನು ಮತ್ತು ಪಕ್ಷಗಳನ್ನು ದೂರವಿಡಲು ಒಂದು ಚಳವಳಿ ಹುಟ್ಟುಹಾಕಿ ಅದನ್ನು ಒಂದು ಮಟ್ಟಕ್ಕೆ ತಲುಪಲಾಗಿದೆ. ಸವಾಲುಗಳು ನಮ್ಮೆದುರಿಗೆ ಇದ್ದವು. ಆ ಸವಾಲುಗಳನ್ನು ಎದರಿಸಲು ಗಟ್ಟಿಯಾಗಿ ನಿಂತೆವು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಹೆಸರು ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದರು. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ” ಎಂದು ತಿಳಿಸಿದರು.
ಈ ವೇಳೆ ಮಲ್ಲಿಗೆ ಸಿರಿಮನೆ, ದುರುಗೇಶ್ ಬರಗೂರು, ಶೈಲಜಾ ಹಿರೇಮಠ, ಕುಮಾರ ಸಮತಳ ಸೇರಿದಂತೆ ಇತರರು ಇದ್ದರು.
