ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗಡ್ಡಿ ಗ್ರಾಮದ ಆಗೋಲಿ ರಸ್ತೆಯ ಬಳಿಯಿರುವ ರೈತ ಕುಂಬಾರ ಮುದುಕಪ್ಪ ಜಮೀನಿನಲ್ಲಿ ರಮೇಶ್ ಎಂಬುವವರಿಗೆ ಸೇರಿದ ನಾಲ್ಕು ಹಸುಗಳು ಹಾಗೂ ಒಂದು ಕರುವನ್ನು ಖದೀಮರು ಕಳ್ಳತನ ಮಾಡಿದ್ದಾರೆ.
ಭಾನುವಾರ ಸಂಜೆ ಜಮೀನಿನ ಮನೆಯಲ್ಲಿ ಹಸುಗಳನ್ನು ಕಟ್ಟಿಹಾಕಿ ರಮೇಶ್ ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಜಮೀನಿಗೆ ಬಂದಾಗ ಹಸುಗಳು ಹಾಗೂ ಕರು ಕಳ್ಳತನವಾಗಿರುವುದನ್ನು ಕಂಡ ರೈತ ಆತಂಕಕ್ಕೆ ಒಳಗಾಗಿದ್ದಾರೆ.
ಸುಮಾರು ₹2.5 ಲಕ್ಷ ಮೌಲ್ಯದ 4 ಹಸುಗಳಿದ್ದವು. ಭಾನುವಾರ ರಾತ್ರಿ ದುಷ್ಕರ್ಮಿಗಳು ಅಶೋಕ ಲೈಲಾಂಡ್‌ನಲ್ಲಿ ಕಳ್ಳತನ ಮಾಡಿರುವ ಬಗ್ಗೆ ಸ್ಥಳೀಯರಿಂದ ಸಂಶಯ ವ್ಯಕ್ತವಾಗಿದೆ.

ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಬೀಡಿ ಕಾರ್ಮಿಕರಿಗೆ ಸಿಗದ ಮೂಲ ಸೌಲಭ್ಯ: ಹಕ್ಕುಗಳ ಬಗ್ಗೆ ತಿಳಿಸಿದ ಮುಖಂಡರು
“ಇತ್ತೀಚಿಗೆ ಇದೇ ಗ್ರಾಮದಲ್ಲಿ ಸುರೇಶ್ ಎಂಬುವವರಿಗೆ ಸೇರಿದ 9 ಕುರಿಗಳು ಕಳ್ಳತನ ಆಗಿದ್ದವು. ಕೊಪ್ಪಳ ಜಿಲ್ಲೆಯಲ್ಲಿ ಹಸು, ಕುರಿಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ತಳಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುರಿಗಳು ಕಳವಾಗಿರುವುದು ಕಂಡುಬಂದಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.