ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಬಳ್ಳಿ-ಗೊಂಡಬಾಳ ಗ್ರಾಮಸ್ಥರು 200-300 ಮೀಟರ್ ಅಂತರದಲ್ಲಿರುವ ಗೊಂಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಬಳ್ಳಿ ಗ್ರಾಮದಲ್ಲಿ 64 ಎಕರೆ ಜಮೀನಿನಲ್ಲಿ ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಮುಂದಾಗಿರುವುದನ್ನು ವಿರೋಧಿಸಿ ಎರಡು ಗ್ರಾಮಸ್ಥರು ಬೈಕ್ ಜಾಥಾ ಮುಖಾಂತರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಿದರು.
ಈಗಾಗಲೇ ಗ್ರಾಮ ಪಂಚಾಯಿತಿಗೆ ಎನ್‌ಒಸಿ ಪಡೆಯಲು ಕಂಪನಿ ಅರ್ಜಿ ಸಲ್ಲಿಸಿದೆ. ಆದರೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಗ್ರಾಮಸ್ಥರ ಪ್ರಬಲ ವಿರೋಧವಿದೆ. ಈ ಹಿಂದೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೊಪ್ಪಳ ಪರಿಸರ ಇಲಾಖೆಯು ನಡೆಸಿರುವ ಅಹಲವಾಲು ಸಭೆಯಲ್ಲಿಯೂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ತಕರಾರು ಅರ್ಜಿ ಸಲ್ಲಿಸಿದ್ದಾರೆ.
2021ರಿಂದ ಸಕ್ಕರೆ ಕಾರ್ಖಾನೆಗೆ ಮೂರು ಗ್ರಾಮಸ್ಥರ ಪ್ರಬಲವಾದ ವಿರೋಧವಿದ್ದು ಹಾಗೂ 500ಕ್ಕೂ ಹೆಚ್ಚು ತಕರಾರು ಮನವಿ ಸಲ್ಲಿಸಿದ್ದರೂ ಈಗ ಸಕ್ಕರೆ ಕಾರ್ಖಾನೆಗೆ ಎನ್ಒಸಿ ಕೊಡಲು ಠರಾವು ಪಾಸ್ ಮಾಡಿರುವುದನ್ನು ಗ್ರಾಮಸ್ಥರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅದ್ಯಕ್ಷರು ಗ್ರಾ.ಪಂಚಾಯಿತಿ ಸಬೆಯಲ್ಲಿ ಎನ್‌ಒಸಿ ಮಂಜೂರಿಗೆ ಠರಾವು ಪಾಸ್ ಮಾಡಿ ಕೊಡಲಾಗಿದೆ. ಆದರೆ, ಆ ಠರಾವು ಹಿಂಪಡೆಯುವ ಅಧಿಕಾರ ನಮಗಿಲ್ಲ, ಅದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಇದೆಯೆಂದು ಪಿಡಿಒ ಹಾರಿಕೆ ಉತ್ತರ ಕೊಟ್ಟಾಗ ಗ್ರಾಮಸ್ಥರು ತೀವ್ರವಾದ ವಿರೋಧ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳ್ತಂಗಡಿ: ಎಸ್‌ಐಟಿಗೆ ಸಮಗ್ರ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು: ಸಮಾನ ಮನಸ್ಕ ಸಂಘಟನೆ
ಪಿಡಿಒ ಜಯಲಕ್ಷ್ಮಿ ಬಿ ಮಾತನಾಡಿ, “ನಾಳೆಯೇ ತುರ್ತು ಸಭೆ ಕರೆದು ಸದಸ್ಯರ ಜೊತೆ ಚರ್ಚಿಸಿ ಎನ್ಒಸಿ ಠರಾವು ಹಿಂಪಡೆಯಲಾಗುವುದು” ಎಂದು ಭರವಸೆ ಕೊಟ್ಟರೂ ಪ್ರತಿಭಟನಾ ನಿರತ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ.
ಪಿಎಸ್ಐ ವಿರೇಶ ಬಾಣಶೆಟ್ಟಿ ಅವರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಓಲೈಸಲು ಯತ್ನಿಸಿದರೂ ಜನರು ಪಟ್ಟು ಬಿಡದೆ ಅಧಿಕೃತವಾಗಿ ಲಿಖಿತರೂಪದಲ್ಲಿ ಭರವಸೆ ಕೊಟ್ಟರೆ ಮಾತ್ರ ನಮ್ಮ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಹೇಳಿದರು.