ಬಲ್ಡೋಟಾ, ಬಿಎಸ್‌ಪಿಎಲ್ ಕಾರ್ಖಾನೆ ವಿಸ್ತರಣೆ ಹಾಗೂ ಕೊಪ್ಪಳ ಜಿಲ್ಲೆಯ ಸುತ್ತ ನಿರ್ಮಿಸಿರುವ ಕಾರ್ಖಾನೆಗಳನ್ನು ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತೊಂದು ಹಂತದ ಹೋರಾಟಕ್ಕೆ ಸಜ್ಜಾಗಿದೆ.
ಹೋರಾಟದ ರೂಪುರೇಷೆ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ನಗರದ ವಾಣಿಜ್ಯೋದ್ಯಮಿಗಳು, ಪರಿಸರಕ್ಕಾಗಿ ನಾವು ಸಂಘಟನೆ, ವಿವಿಧ ಹೋರಾಟ ನಿರತ ಸಂಘಗಳ ಪ್ರಮುಖರು ಬಲ್ಡೋಟ ಹಟಾವೋ, ಕೊಪ್ಪಳ ಬಚಾವೋ ಎನ್ನುವ ತೀರ್ಮಾನಕ್ಕೆ ಏಕಾಭಿಪ್ರಾಯ ವ್ಯಕ್ತಪಡಿಸಿದರು. ಬಹುತೇಕ ಪ್ರಮುಖರು ಗವಿ ಶ್ರೀಗಳ ಜೊತೆ ಚರ್ಚಿಸಿ ಅವರ ನೇತೃತ್ವದಲ್ಲಿ ಹೋರಾಟ ನಡೆಯಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಜನಜಾಗೃತಿ ಮೂಡಿಸಲು ರೋಗ ಬಾಧಿತರ ಕಿರುಚಿತ್ರ ಪ್ರದರ್ಶನ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಅತೀ ಶೀಘ್ರದಲ್ಲಿ ಕಾರ್ಯಯೋಜನೆ ತಯಾರಿಸಿಕೊಳ್ಳಲು, ಗವಿ ಶ್ರೀಗಳನ್ನು ನಗರದ ಪ್ರಮುಖರು, ಪರಿಸರ ಹಿತರಕ್ಷಣಾ ವೇದಿಕೆ ಮುಖಂಡರು ಮತ್ತು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಒಳಗೊಂಡು ಸಾಮೂಹಿಕ ನಾಯಕತ್ವದ ತಂಡ ಭೇಟಿ ಮಾಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಕೊಪ್ಪಳಕ್ಕೆ ಏನೂ ದಕ್ಕಿಲ್ಲ, ಹೊಗೆ, ಧೂಳು ದಕ್ಕಿದೆ. ಸಮಯಕ್ಕೆ ಸರಿಯಾಗಿ ನಾವು ಹೋರಾಟ ಮಾಡಬೇಕು. ಇಲ್ಲದಿದ್ದರೆ ನಮ್ಮ ಆರೋಗ್ಯವನ್ನ ನಾವೇ ಹಾಳು ಮಾಡಿಕೊಳ್ಳುತ್ತೇವೆ. ಈ ದೇಶಕ್ಕೆ ಸ್ವಾತಂತ್ರ್ಯ ಧೀರ್ಘ ಕಾಲದ ಹೋರಾಟದಿಂದ ಬಂದಿದೆ; ಹಾಗೆ ನಾವೂ ‘ಮಾಡು ಇಲ್ಲವೆ ಮಡಿ’ ಎಂಬ ಘೋಷ ವಾಕ್ಯದೊಂದಿಗೆ ಹೋರಾಟ ಮಾಡಬೇಕು. ಬಿಎಸ್‌ಪಿಎಲ್ ಸ್ಥಳಾಂತರ ಮಾಡಿ ಇಲ್ಲ ಕೊಪ್ಪಳವನ್ನಾದರೂ ಸ್ಥಳಾಂತರ ಮಾಡಿ” ಎಂದು ಅಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ನಗರಸಭೆ ಚುನಾವಣೆ; ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ
ಸಭೆಯಲ್ಲಿ ಮಹಾಂತೇಶ ಕೊತಬಾಳ, ಅಂದಣ್ಣ ಅಗಡಿ, ಸಿದ್ದಣ್ಣ ನಾಲ್ವಾಡ, ಡಾ. ಚಂದ್ರಶೇಖರ ಕರಮುಡಿ, ಮಹಾಂತೇಶ ಮಲ್ಲನಗೌಡರ್, ಶರಣು ಡೊಳ್ಳಿನ, ಕಾಶಪ್ಪ ಛಲವಾದಿ, ಬಿ. ಜಿ. ಕರಿಗಾರ, ವೈ.ಬಿ. ಬಂಡಿ, ನಿವೃತ್ತ ಪ್ರಾಂಶುಪಾಲ ರಾಜೂರ, ವಿಪಿನ್ ತಾಲೇಡಾ, ಮುದುಕಪ್ಪ, ರವಿ ಕಾಂತನವರ, ಮೌನೇಶ ಬಡಿಗೇರ, ಬಸವರಾಜ ಸೇರಿ ಅನೇಕರು ಇದ್ದರು.