ಕೊಪ್ಪಳ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಒಂದು ಕಡೆಯಾದರೆ ಮತ್ತೊಂದು ಕಡೆ ಯೂರಿಯಾ ರಸಗೊಬ್ಬರದ ಕೊರತೆಯುಂಟಾಗಿದೆ. ಹೀಗಾಗಿ, ಕಂಗಾಲಾಗಿರುವ ರೈತರು, ಎರಡನೇ ದಿನವೂ ರಸ್ತೆಗಿಳಿದಿದ್ದು, ಗಂಜ್ ಸರ್ಕಲ್‌ನಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಜಿಲ್ಲೆಯಲ್ಲಿ 4-5 ದಿವಸದಿಂದ ಸುರಿಯುತ್ತಿರುವ ಮಳೆಯಿಂದ ಹೆಚ್ಚು ತಂಪಾದ ವಾತಾವರಣ ಇರುವುದರಿಂದ ಬೆಳೆದು ನಿಂತ ಬೆಳೆಗಳಿಗೆ ಯೂರಿಯಾ ಗೊಬ್ಬರದ ಅಗತ್ಯಕ್ಕೂ ಹೆಚ್ವಾಗಿ ಬೇಕಾಗಿದೆ. ಇಲ್ಲದಿದ್ದರೆ ತಂಪಾದ ಹವಾಮಾನ ಮಳೆ ವೈಪರೀತ್ಯದಿಂದ ಭೂಮಿ ತೇವಾಂಶ ಹೆಚ್ಚಾಗಿ ಬೆಳೆಯಲ್ಲಿ ಹಳದಿ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ರೈತರಿಂದ ಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ.
ಗೋದಾಮಿನಲ್ಲಿ ಗೊಬ್ಬರ ಇದ್ದರೂ ರೈತರಿಗೆ ಕೊಡದೆ ಅದನ್ನು ಬೇರೆಡೆಗೆ ಸರಬರಾಜು ಮಾಡುತ್ತಿದ್ದಾರೆ. ರೈತರ ಕಣ್ಣಿಗೆ ಸೊಸೈಟಿ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ಆರೋಪಿ ಹೊಸಪೇಟೆ ಮುಖ್ಯ ರಸ್ತೆಯಲ್ಲಿ ಸಾರಿಗೆ ಬಸ್ ಸೇರಿದಂತೆ ವಾಹನಗಳನ್ನು ತಡೆದು ಪ್ರತಿಭಟಿಸಿದರು.
ದಿಢೀರ್ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಮಧ್ಯ ಪ್ರವೇಶಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೂ ಕೂಡ ರೈತರು ಹಿಂದೆ ಸರಿಯಲಿಲ್ಲ. ಇದರಿಂದ ಕೋಪಗೊಂಡ ಟೌನ್ ಪೋಲೀಸ್ ಠಾಣೆ ಪಿಎಸ್ಐ, ರೈತರಿಗೆ ಅವಾಚ್ಯ ಶಬ್ದ ಬಳಸಿದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಪ್ರತಿಭಟನಾನಿರತ ರೈತರು, ಪೊಲೀಸರಿಗೆ ಧಿಕ್ಕಾರ ಎಂದು ಕೂಗಿದ ಘಟನೆಯೂ ನಡೆಯಿತು.
ಇದನ್ನು ಓದಿದ್ದೀರಾ? ಬೆಳಗಾವಿ | ಧರ್ಮಾಂದತೆಯ ‘ದ್ವೇಷ’ದ ವಿಷವನ್ನು ಸೋಲಿಸಿದ ಮುಸ್ಲಿಮ್ ಶಿಕ್ಷಕನ ‘ಪ್ರೀತಿ’
ಬಳಿಕ ಸ್ಥಳಕ್ಕೆ ಆಗಮಿಸಿದ ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ್ ಇಟ್ನಾಳ್, ಪ್ರತಿಭಟನಾನಿರತ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ‘ಸೋಮವಾರದವರೆಗೆ ಕಾಯಿರಿ. ರಸಗೊಬ್ಬರ ಕೊರತೆಯಾಗಂತೆ ನೋಡಿಕೊಳ್ಳಲಾಗುವುದು’ ಎಂದಾಗ ತಮ್ಮ ಪ್ರತಿಭಟನೆ ಹಿಂಪಡೆದು, ಸ್ಥಳದಿಂದ ತೆರಳಿದರು.
