ಒಂದು ಧರ್ಮದ ಆಚರಣೆಗಳನ್ನು ಇತರೆ ಧರ್ಮದವರು ಗೌರವಿಸುವುದೇ ಸೌಹಾರ್ದತೆ ಎಂದು ಭ್ರಾತೃತ್ವ ಸಮಿತಿಯ ಕೊಪ್ಪಳ ಜಿಲ್ಲಾ ಸಂಚಾಲಕ ಎಸ್ ಎ ಗಫಾರ್ ಹೇಳಿದರು.
ಕೊಪ್ಪಳ ಭಾಗ್ಯನಗರ ಬಳಿಯ ನವನಗರದ ಇರುವಾತನು ಚರ್ಚಿನಲ್ಲಿ ಭ್ರಾತೃತ್ವ ಸಮಿತಿ ಹಾಗೂ ಇರುವಾತನು ಚರ್ಚ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕ್ರಿಶ್ಚಿಯನ್ ಸಮುದಾಯದವರು ಯೇಸುಕ್ರಿಸ್ತನು ಶಿಲುಬೆಗೇರಿದ ದಿನವನ್ನು ಶುಭ ಶುಕ್ರವಾರವೆಂದು ಸ್ಮರಿಸುತ್ತಾರೆ. ಒಂದು ಧರ್ಮದ ಆಚರಣೆಗಳನ್ನು ಇನ್ನೊಂದು ಧರ್ಮದವರನ್ನು ಗೌರವಿಸುವಂತೆ ನಮ್ಮ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ, ಇನ್ನೊಂದು ಧರ್ಮವನ್ನು ಕೀಳಾಗಿ ಕಾಣುವುದು, ಟೀಕಿಸುವುದು ಆಗಬಾರದು. ಎಲ್ಲ ಧರ್ಮದವರೂ ಒಂದಾಗಿರಬೇಕಾದರೆ ಒಂದು ಧರ್ಮದವರು ಇನ್ನೊಂದು ಧರ್ಮ ಆಚರಿಸುವಂತೆ ಹೇಳುತ್ತಿಲ್ಲ. ಸಂವಿಧಾನದ ಆಶಯದಂತೆ ಅನ್ಯ ಧರ್ಮಗಳನ್ನೂ ಗೌರವಿಸುತ್ತ ಎಲ್ಲರೂ ಕೂಡಿಕೊಂಡು ಬಾಳಬೇಕು” ಎಂದರು.
ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮಾತನಾಡಿ, “ಕ್ರಿಶ್ಚಿಯನ್ ಧರ್ಮದವರು ಶಾಂತಿ ಪ್ರಿಯರು. ಅವರಿಗೆ ಗುಡ್ ಫ್ರೈಡೆ ಅಂದರೆ ಕಪ್ಪು ಶುಕ್ರವಾರವೆಂದು ಹೇಳಬಹುದು. ಜಗತ್ತಿಗೆ ಒಳ್ಳೆಯದನ್ನು ಸಾರಿರುವ ಯೇಸು ಕ್ರಿಸ್ತನನ್ನು ಇಂದು ನಾವೆಲ್ಲ ನೆನಪಿಸುತ್ತಿದ್ದೇವೆ” ಎಂದು ಹೇಳಿದರು.

ಎಸ್‌ಸಿ/ಎಸ್‌ಟಿ, ಅಲೆಮಾರಿ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜಯ್ ದಾಸ್ ಕೌಜಗೇರಿ ಮಾತನಾಡಿ, “ಮಾನವನಿಗೆ ಎರಡು ಕಣ್ಣುಗಳು ಹೇಗೆ ಮುಖ್ಯವೋ ಹಾಗೆ ನಮ್ಮ ದೇಶದಲ್ಲಿ ಧರ್ಮ ಹಾಗೂ ಸಂವಿಧಾನವೂ ಎರಡೂ ಕಣ್ಣುಗಳಿದ್ದಂತೆ. ಯಾವುದೇ ಒಂದು ಕಣ್ಣಿಗೆ ನೋವಾದರೂ ಕೂಡ ಅಷ್ಟೇ ಸಮಸ್ಯೆಯಾಗುತ್ತದೆ. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಪಾರ್ಸಿ ಹಾಗೂ ಸಿಖ್ ಸಮುದಾಯದವರು ಸೇರಿದಂತೆ ಅನೇಕ ಧರ್ಮೀಯರಿದ್ದಾರೆ. ಸಂವಿಧಾನಕ್ಕೆ ಗೌರವ ಕೊಡುವುದಾದರೆ ಪರ ಧರ್ಮಗಳನ್ನೂ ಗೌರವಿಸುವ ಮೂಲಕ ಐಕ್ಯತೆಯಿಂದ ಬದುಕಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹವಾಮಾನ ವೈಪರೀತ್ಯ | ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಂಗಾಲಾದ ರೈತರು
ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ, ಯೇಸು ಸ್ವಾಮಿ ಈ ಭೂಮಿಗೆ ಮನುಷ್ಯ ಕುಮಾರನಾಗಿ ಜನಿಸಿ ಬಂದು ಮೂವತ್ತ ಮೂರೂವರೆ ವರ್ಷಗಳಲ್ಲಿ 30 ವರ್ಷ ಕುಟುಂಬದ ಜವಾಬ್ದಾರಿ ನಿಭಾಯಿಸಿದರು. ತಂದೆ ತಾಯಿಯೊಂದಿಗೆ ವಿಧೇಯರಾಗಿ ನಡೆದುಕೊಂಡರು, ಮೂರುವರೆ ವರ್ಷಗಳವರೆಗೆ ಹಳ್ಳಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಸಮುದ್ರದ ತೀರಗಳಲ್ಲಿ ಪ್ರಯಾಣ ಮಾಡಿ ದೇವರ ಸುವಾರ್ತೆಗಳನ್ನು ಸಾರಿದರು. ಈ ಭೂಮಿ ಮೇಲಿನ ಎಲ್ಲ ಮನುಷ್ಯರ ಪಾಪ ಪರಿಹಾರಕ್ಕಾಗಿ ಯಜ್ಞ ಬಲಿಯಾಗಬೇಕೆಂಬುದು ದೇವರ ಸಂಕಲ್ಪವಾಗಿತ್ತು. ಹಾಗಾಗಿ ಯೇಸು ಸ್ವಾಮಿ, ʼಈ ಭೂಮಿ ಮೇಲಿರುವ ಎಲ್ಲ ಮನುಷ್ಯರ ಪಾಪವನ್ನು ಮನ್ನಿಸುʼ ಎಂದು ಪ್ರಾರ್ಥಿಸುತ್ತ ಶಿಲುಬೆಗೆ ಏರಿದರು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭ್ರಾತೃತ್ವ ಸಮಿತಿಯ ಕಾರ್ಯಕರ್ತ ಸುಂಕಪ್ಪ ಮೀಸಿ, ರಘು ಮಾಧಕಟ್ಟಿ, ಮೈಲಪ್ಪ ಮಾದಿನೂರ ಹಾಗೂ ಇತರರು ಇದ್ದರು.