ಮೇ 13ರಂದು ಇಡೀ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯ ಮತ ಎಣಿಕೆಯತ್ತ ಚಿತ್ತ ಹರಿಸಿದ್ದರೆ, ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಗಳು ಬಡ ಯುವತಿಯರು ದೇವದಾಸಿ ಪದ್ಧತಿಗೆ ಬಲಿಯಾಗುವುದನ್ನು ತಡೆಯುವಲ್ಲಿ ನಿರತರಾಗಿದ್ದರು. ಅವರ ಪರಿಶ್ರಮ ಫಲ ನೀಡಿದ್ದು, ಈ ಬಾರಿಯ ಹುಲಿಗೆಮ್ಮ ಜಾತ್ರೆಯಲ್ಲಿ ಅನಿಷ್ಟ ದೇವದಾಸಿ ಪದ್ಧತಿ ಆಚರಣೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇವದಾಸಿ ಪದ್ಧತಿ ಅನಿಷ್ಟ ಆಚರಣೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಆದರೂ, ಜಾತ್ರೆ ವೇಳೆ ದೇವರ ಹೆಸರಿನಲ್ಲಿ ಮುತ್ತು ಕಟ್ಟುವುದು, ಜಡೆ ಬಿಡುವುಡು, ದೇವದಾಸಿ ಪದ್ಧತಿಗಳಂತಹ ಆಚರಣೆಗಳನ್ನು ನಡೆಸಲಾಗುತ್ತದೆ.
ಅನಿಷ್ಟ ಪದ್ಧತಿಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಂಡಳಿ ಈ ವರ್ಷ ದೇವಾಲಯದ ಸುತ್ತಲೂ ಕಟ್ಟೆಚ್ಚರ ವಹಿಸಿತ್ತು. ಜಾತ್ರೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಮತ್ತು ಅಧಿಕಾರಿಗಳು ಜನಸಾಮಾನ್ಯರಂತೆ ಸಾಮಾನ್ಯ ಉಡುಪಿನಲ್ಲಿ ಗಸ್ತು ತಿರುಗುತ್ತಿದ್ದರು. ಇದರಂತೆ ಹೆಣ್ಣುಮಕ್ಕಳನ್ನು ದೇವದಾಸಿ ಪದ್ಧತಿಗೆ ದೂಡುವ 30 ಪ್ರಕರಣಗಳನ್ನು ತಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಕಾಲಿಕ ಮಳೆಗೆ ಈರುಳ್ಳಿ ಬೆಳೆ ಹಾನಿ; ಕಂಗಾಲಾದ ರೈತರು
2022ರಲ್ಲಿ ದೇವಸ್ಥಾನದಲ್ಲಿ 300 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ಬಗ್ಗೆ ಯಾರ ವಿರುದ್ಧವೂ ಪ್ರಕರಣ ದಾಖಲಾಗಿರಲಿಲ್ಲ. ಬದಲಾಗಿ, ಪೋಷಕರಿಗೆ ಆಪ್ತಸಮಾಲೋಚನೆ ಮಾಡಿ, ಬುದ್ಧಿ ಹೇಳಿ ಕಳುಹಿಸಲಾಗಿತ್ತು.
“ಜಾತ್ರೆ ಸಮಯದಲ್ಲಿ ಬಹುತೇಕ ಸ್ಥಳಗಳಲ್ಲಿ, ಮನೆಗಳಲ್ಲಿ ರಾತ್ರಿ ವೇಳೆ ಇಂತಹ ಆಚರಣೆಗಳನ್ನು ನಡೆಸಲಾಗುತ್ತದೆ. ಬಡವರು ಹಾಗೂ ಅನಕ್ಷರಸ್ಥರು ಇಂತಹ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಬಲವಂತವಾಗಿ ಹೆಣ್ಣುಮಕ್ಕಳನ್ನು ಇಂತಹ ಅನಿಷ್ಟ ಪದ್ಧತಿಗೊಳಪಡಿಸಲಾಗುತ್ತಿದ್ದು, ಕೊನೆಗೆ ಲೈಂಗಿಕ ಕಾರ್ಯಕರ್ತೆಯರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಮೇ 13ರಂದು ಇಂತಹ 30 ಪ್ರಕರಣಗಳನ್ನು ತಡೆಯಲಾಗಿದ್ದು, ಇನ್ನೂ ಅತ್ಯಗತ್ಯ ಕ್ರಮ ಕೈಗೊಳ್ಳುವ ಅನಿವಾರ್ಯವಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.