ವೈದಿಕ ಪರಂಪರೆ ನಮ್ಮ ಮೇಲೆ ನಿರಂತರವಾಗಿ ಮೌಢ್ಯತೆಯನ್ನ ಹೇರುತ್ತ ಬಂದಿದೆ. ಮಹಿಳೆಯರು ಹೆಚ್ಚು ಮೌಢ್ಯತೆಗೊಳಗಾಗಿ ಶೋಷಣೆಗೊಳಪಡುತ್ತಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಹೇಳಿದರು.
ಕೊಪ್ಪಳದ ಕುಕುನೂರು ತಾಲೂಕಿನ ದ್ಯಾಂಪೂರ್ ಗ್ರಾಮದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಕಾವ್ಯಾನಂದ ಮಹಿಳಾ ಅಭಿಮಾನಿಗಳ ಬಳಗದಿಂದ ಮನೆ ಮನೆಯಲ್ಲಿ ಬಸವ ಪಂಚಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಲನ್ನು ಹುತ್ತಕ್ಕೆ ಎರೆಯದೇ ವಿಶೇಷ ಮಕ್ಕಳಿಗೆ ಹಾಲು ಕೊಟ್ಟು ಕುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
“ಮಹಿಳೆಯರಲ್ಲಿ ಹೆಚ್ಚು ವೈಚಾರಿಕತೆ, ಅರಿವು ಜಾಗೃತಿ ಮೂಡಿಸುವ ಕೆಲಸ ಮಾನವ ಬಂಧುತ್ವ ವೇದಿಕೆ ಮಾಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ‘ಜನರ ಸೇವೆ ಮಾಡಲು ಬಂದಿದ್ದೇನೆʼ ಎಂದರು. ಎರಡನೇ ಬಾರಿ ʼನಾನು ಜೈವಿಕವಾಗಿ ಹುಟ್ಟಿಲ್ಲʼ ಎಂದರು… ಹೀಗೆ ಪ್ರಧಾನಿಗಳು ಸುಳ್ಳು ಹೇಳಿ ಜನರಲ್ಲಿ ಮೌಢ್ಯತೆ ಬಿತ್ತಿದರು. ಜಾಗೃತಗೊಳಿಸುವ ಕೆಲಸ ಮಾಡಲಿಲ್ಲ. ಹಾಲನ್ನ ಹುತ್ತಕ್ಕೆ ಹಾಕದೇ ಮಕ್ಕಳಿಗೆ ಕೊಟ್ಟರೆ ಆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದು ಕಡಿಮೆ ಆಗುತ್ತದೆ” ಎಂದರು.
ಅನ್ನದಾನೇಶ್ವರ ಶಾಖಾಮಠ ಮಹಾದೇವ ಸ್ವಾಮಿಗಳು ಮಾತನಾಡಿ, “ಬಿದ್ದವರನ್ನ ಮೇಲೆ ಎತ್ತುವುದು, ಹಸಿದವರಿಗೆ ಅನ್ನ ಹಾಕುವುದು ಪೂಜೆ. ಕಲ್ಲು ದೇವರಿಗೆ ಹಾಲು ಹಾಕುವುದು, ಕಲ್ಲು ನಾಗರಕ್ಕೆ ಹಾಲು ಎರೆಯುವುದರಿಂದ ಪೂಜೆ ಅಲ್ಲ ಇದರಿಂದ ಮೌಢ್ಯತೆ ಹೆಚ್ಚಾಗುತ್ತದೆ ಹೊರತು ವೈಚಾರಿಕತೆ ಬೆಳೆಯಲು ಸಾಧ್ಯವಿಲ್ಲ” ಎಂದರು.
ಲಡಾಯಿ ಪ್ರಕಾಶಕ ಬಸವರಾಜ ಸುಳೆಬಾವಿ ಮಾತನಾಡಿ, “ಓದುವುದರ ಮೂಲಕ ನೀವು ಮನುಷ್ಯರಾಗಬಹುದು. ಮನುಷ್ಯರ ನಡುವೆ ಮನುಷ್ಯತ್ವ ನಾಶವಾಗುತ್ತಿದೆ. ಕಾವ್ಯಾನಂದರು ‘ಯಾವ ಧರ್ಮೀಯನಾದರೇನು ಮೊದಲು ಮನುಷ್ಯನಾಗು’ ಅಂತ ಹೇಳಿದ್ದಾರೆ. ಬಿದ್ದವರನ್ನ ಎಬ್ಬಿಸಿ ನಿಲ್ಲಿಸುವುದೇ ಮನುಷ್ಯತ್ವ. ಮನುಷ್ಯತ್ವ ಅನಿಸಿಕೊಳ್ಳಲು ಬಹಳ ದಿನಬೇಕು. ಪುರುಷರೇ ಹೆಚ್ಚು ದೇಶವನ್ನಾಳಿದ್ದಾರೆ. ಆದರೆ, ಮಹಿಳೆಯರನ್ನ ಗೌಣ ಮಾಡುತ್ತಾ ಬಂದಿದ್ದಾರೆ. ತಾಯ್ತನ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಗಂಡು ಮಕ್ಕಳಲ್ಲಿ ಅದು ವಿರಳ. ದೇಶ, ಮನೆ, ಓಣಿ, ಶಾಂತವಾಗಿದ್ದರೆ ಅದು ಮಹಿಳೆಯರಿಂದಲೇ ಸಾಧ್ಯ” ಎಂದರು.
ಸಿದ್ದಮ್ಮ ಪಾಟೀಲ್ ಬಾಗಲಕೋಟೆ ಮಾತಾಡಿ, “ಸಂವಿಧಾನವು ವಚನಗಳ ತಳಹದಿಯಲ್ಲೇ ಇದೆ. ಸಂವಿಧಾನವನ್ನು ಅಂಬೇಡ್ಕರ್ ಅಲ್ಲದೇ ಕೋಮುವಾದಿಗಳ ಕೈಯಲ್ಲಿ ರಚನೆ ಮಾಡಲು ಅವಕಾಶ ಸಿಕ್ಕಿದ್ದರೆ, ಇವತ್ತು ದೇಶದಲ್ಲಿ ಮನುಷ್ಯತ್ವವೇ ನಾಶವಾಗುತ್ತಿತ್ತು. ಮೌಢ್ಯತೆಯಿಂದ ಮುಖ್ಯವಾಗಿ ಮಹಿಳೆಯರು ದೂರ ಇರಬೇಕು. ಹೆಚ್ಚು ಜಾಗೃತರಾಗಬೇಕು. ಅನುಭವದ ಮಂಟಪದಡಿಯಲ್ಲಿ ಸಂವಿಧಾನ ರಚನೆಯಾಗಿದೆ. ಅದನ್ನು ಅರ್ಥ ಮಾಡಿಕೊಂಡು ವಿಚಾರವಂತರಾಗಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಅಂಕಪಟ್ಟಿ, ಟಿಸಿ ಕೊಡದ ವಾಸವಿ ಶಾಲೆ ಮುಖ್ಯಶಿಕ್ಷಕ ಫಕ್ಕೀರಪ್ಪ ಎಮ್ಮಿನವರ: ಪಾಲಕರ ಪರದಾಟ
ವಿಸ್ತಾರ ಸಂಸ್ಥೆ ನಿರ್ದೇಶಕ ಡಾ.ನಾಜಿರ್ ಪಿ ಎಸ್ ಮಾತನಾಡಿ, “ಮುಟ್ಟು ಆಗುವ ಸಂದರ್ಭದಲ್ಲಿ ಮಹಿಳೆಯರನ್ನ ಹೊರಗಿಡುವ ಮೌಢ್ಯತೆ ಹೆಚ್ಚಾಗಿರುವುದು ಮಹಿಳೆಯರ ಹಕ್ಕನ್ನು ಹತ್ತಿಕ್ಕುವುದೇ ಆಗಿದೆ. ಮಕ್ಕಳಿಗೆ ಶಾಲೆಯ ಆರಂಭದಲ್ಲೇ ಜಾತಿ, ಲಿಂಗ ಗುರುತಿಸುವ ಕೆಲಸ ಮಾಡುತ್ತೇವೆ. ಮನುಷ್ಯನ ಬದುಕಿನಲ್ಲಿ ಮಾನವೀಯತೆಯೇ ಮಾಯವಾದರೆ ಬದುಕುವುದಾದರೂ ಹೇಗೆ ಎಂಬ ಪ್ರಶ್ನೆ ಬರುತ್ತದೆ. ಮನುಷ್ಯತ್ವ ಅಳಿದಂತೆಲ್ಲ ಬದುಕುವ ಸವಾಲು ಹೆಚ್ಚಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಟಿ.ರತ್ನಾಕರ, ಪ್ರೇಮಾ ಮುದಗಲ್, ಮಂಜುಳಾ ಮಾಲಗಿತ್ತಿ, ಬುಡ್ಡಮ್ಮ ಮರಡಿ, ಸಾವಿತ್ರಿ ಮರಡಿ, ಗಂಗಮ್ಮ ಹುಡೇದ, ಸರಸ್ವತಿ ಹಡಪದ, ಅನ್ನಪೂರ್ಣಮ್ಮ ಹುಣಸಿಮರದ, ಶಿವಬಸಪ್ಪ ನೋಟಗಾರ, ಮೋನಾಕ್ಷಿ ಸಾಸ್ವಿಹಾಳ, ರಾಧಿಕ ಬಡಿಗೇರ ಭೀಮಣ್ಣ ಹಾಗೂ ಇತರರು ಉಪಸ್ಥಿತರಿದ್ದರು.