ಈ ಬಾರಿ ನಗರಸಭೆ ಬಜೆಟ್‌ನಲ್ಲಿ ಕೊಪ್ಪಳದ ಭಾಗ್ಯನಗರವನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವುದು ಸೇರಿದಂತೆ ಹಲವು ಮುಖ್ಯ ಬೇಡಿಕೆಗಳನ್ನು ಈಡೇರಿಸಬೇಕೆಂದು ಜನಪರ ಸಂಘಟನೆಗಳ ಒಕ್ಕೂಟದಿಂದ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೆ ಬಜೆಟ್ ಮಂಡನೆ ಪೂರ್ವ ಜನಾಗ್ರಹ ಮನವಿ ಸಲ್ಲಿಸಲಾಯಿತು.
“ಪುರಸಭೆ ವ್ಯಾಪ್ತಿಯ ಸುತ್ತಲಿನ ಹಳ್ಳಿಗಳನ್ನು ಗುರುತಿಸಿ ಫಲಕಗಳನ್ನು ಅಳವಡಿಸಬೇಕು. ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ವಿಳಂಬವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಒಂದರ್ಧ ಭಾಗದಲ್ಲಿ ಬರುವುದರಿಂದ ಉಳಿದ ಅರ್ಧ ಭಾಗ ಮಾತ್ರ ಅಂದರೆ ದದೆಗಲ್ ಬಳಿಯಿಂದ ಭಾಗ್ಯನಗರದ ಹೊರ ವಲಯದಿಂದ ಕಿನ್ನಾಳ, ಕುಷ್ಟಗಿ ರಸ್ತೆ ಒಳಗೊಂಡು ಕಿಡದಾಳ ಬಳಿಯಿಂದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿವರೆಗೆ ಹೊಸ ಅರ್ಧ ವರ್ತುಲ ರಸ್ತೆ ನಿರ್ಮಿಸಬೇಕು” ಎಂದು ಒತ್ತಾಯಿಸಲಾಯಿತು.
“ಮಳೆಗಾಲದಲ್ಲಿ ಮಳೆ ನೀರು ರಾಜ ಕಾಲುವೆ ತುಂಬಿ ರಸ್ತೆ ಪಕ್ಕದ ಬಡಾವಣೆಗಳ ಮನೆಗಳಿಗೆ ನುಗುತ್ತದೆ. ತಕ್ಷಣ ಚರಂಡಿಯಲ್ಲಿರುವ ಎಲ್ಲಾ ಗಿಡಗಳನ್ನು ತೆಗೆಸಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು. ರಾಜ ಕಾಲುವೆ ಕಳಪೆ ಕಾಮಗಾರಿ ನಿಲ್ಲಿಸಿ, ಆಧುನಿಕ ಹಾಗೂ ವೈಜ್ಞಾನಿಕ ಮಾದರಿಯಲ್ಲಿ ನವೀಕರಣ ಮಾಡಬೇಕು. ನಗರದ ರಸ್ತೆಗಳು ಕಳಪೆಯಾಗಿದ್ದು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಈ ಹಿಂದೆ ಮನವಿ ಮಾಡಲಾಗಿತ್ತು. ಹಾಳಾದ ರಸ್ತೆಗಳ ಸಮೀಕ್ಷೆ ನಡೆಸಿ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ನಡೆಸಿ, ಅವೈಜ್ಞಾನಿಕ ವೇಗ ನಿಯಂತ್ರಕಗಳನ್ನು ತೆಗೆಸಿ ಉಚ್ಚ ನ್ಯಾಯಾಲಯದ ಆಶಯದಂತೆ ಆರು ಇಂಚಿಗೂ ಕಡಿಮೆ ಎತ್ತರದ ವೇಗ ನಿಯಂತ್ರಕಗಳನ್ನು ನಿರ್ಮಿಸಬೇಕು” ಎಂದು ಒತ್ತಾಯಿಸಲಾಯಿತು.
“ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಕೃತಕ ಬುದ್ಧಿಮತ್ತೆ ಶಿಕ್ಷಣ, ತಂತ್ರಜ್ಞಾನ ಶಿಕ್ಷಣ ಮುಂತಾದ ಶಿಕ್ಷಣ ಒಂದೇ ಸೂರಿನಡಿ ದೊರೆಯುವಂತೆ ಯೋಜನೆ ರೂಪಿಸಬೇಕು. ನಗರದಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದ್ದು, ಅದರ ನಿಷೇಧ ಮಾಡಿ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಬೇಕು” ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | ತರಕಾರಿ ಬೆಲೆ ಕುಸಿತ; ರೈತರಿಗೆ ಆರ್ಥಿಕ ಹೊಡೆತ
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಯುವ ವಕೀಲ ಮಹಾಂತೇಶ ಜಿ, ಚಾಕ್ರಿ, ರೈಲ್ವೆ ಜನಪರ ಹೋರಾಟ ಸಮಿತಿಯ ಕಾರ್ಯದರ್ಶಿ ಮಖಬೂಲ್ ರಾಯಚೂರು, ಮುತ್ತು ಹಡಪದ ಸೇರಿದಂತೆ ಇತರರು ಇದ್ದರು.