ಪಡಿತರ ಆಹಾರ ಧಾನ್ಯ ಮತ್ತು ಮನರೇಗಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ ಕಾರ್ಯಕರ್ತರು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಸವೇಶ್ವರ ಸರ್ಕಲ್‌ನಲ್ಲಿ ಅಹೋರಾತ್ರಿ ಧರಣಿ ನಡೆಸಿದರು.
ತಾಲೂಕು ಕಾರ್ಯಕರ್ತೆ ವಿರುಪಮಾ ದೋಟಿಹಾಳ ಮಾತನಾಡಿ, “ಸರ್ಕಾರ ಗ್ಯಾರಂಟಿ ಯೋಜನೆ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ನೀಡಬೇಕಾಗಿದ್ದ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿ, ಉಳಿದ 5 ಕೆಜಿಯ ಅಕ್ಕಿಯ ಹಣವನ್ನು ಖಾತೆಗೆ ಜಮಾ ಮಾಡುತ್ತಿದ್ದಾರೆ. ಹಣದ ಬದಲು ದಿನನಿತ್ಯ ಬಳಕೆಯಾಗುವ ಎಣ್ಣೆ, ಜೋಳ, ರಾಗಿ, ಸಕ್ಕರೆ ವಿತರಣೆ ಮಾಡಬೇಕು” ಎಂದು ಒತ್ತಾಯಿಸಿದರು.
“ಕೆಲವು ಕುಟುಂಬದಲ್ಲಿ ಮಹಿಳೆಯರ ಕೈಗೆ ಹಣ ಸಿಗುತ್ತದೆ. ಅವರು ದಿನನಿತ್ಯದ ಆಹಾರ ಭದ್ರತೆಗೆ ಬಳಸಿ ಕೊಳ್ಳುತ್ತಾರೆ. ಆದರೆ, ಕೆಲವು ಮನೆಯಲ್ಲಿ ಗಂಡಸರು ತಮ್ಮ ದುಶ್ಚಟಗಳಿಗೆ ಬಳಸಿ ಕೊಳ್ಳುತ್ತಾರೆ. ಆಗ ಅಪೌಷ್ಠಿಕತೆ ಹೆಚ್ಚಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪಡಿತರದಲ್ಲಿ ಸ್ಥಳೀಯ ಆಹಾರ ಧಾನ್ಯ ವಿತರಿಸುವಂತೆ ಗ್ರಾಕೂಸ ಆಗ್ರಹ
“ಕೂಲಿ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ವಿತರಣೆ ಮಾಡಬೇಕು. ಇದರಿಂದ ದೊರೆಯುವ ಸೌಲಭ್ಯಗಳಿಂದ ಅನುಕೂಲವಾಗುತ್ತದೆ. ನಿತ್ಯವೂ ದುಡಿದು ತಿನ್ನುವ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ಸೇರಿದಂತೆ ಸರ್ಕಾರದಿಂದ ಸಾಕಷ್ಟು ಯೋಜನೆಗಳು ದೊರೆಯುತ್ತವೆ. ಇದರಿಂದ ಕೂಲಿಕಾರರಿಗೆ ಅನುಕೂಲವಾಗುತ್ತದೆ” ಎಂದು ಒತ್ತಾಯಿಸಿದರು.
ಈ ಹೋರಾಟದಲ್ಲಿ ಬಸವರಾಜ ರಾಯಚೂರು, ಭಾರತಿ ಬಾದಿಮನಾಳ, ಜಿ ಎಸ್ ಶರಣು, ನೇತ್ರಾ ಕ್ಯಾದಗುಪ್ಪ, ಕೆಂಚಮ್ಮ ಮಹಾದೇವಿ, ಚಂದಾಲಿಂಗಪ್ಪ ಕಲಾಲ್ ಬಂಡಿ ಸೇರಿದಂತೆ ನೂರಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಬೆಂಬಲಿಗರು ಮತ್ತು ಕುಷ್ಟಗಿ ತಾಲೂಕಿನ ಕೂಲಿ ಕಾರ್ಮಿಕ ಸದಸ್ಯರು ಇದ್ದರು.