- ಜನಪದ ರಂಗಭೂಮಿ ಜನ ಚಳುವಳಿಯನ್ನು ಕಟ್ಟಲು ದಾರಿಯಾಗಿವೆ.
- ಬಸವಕಲ್ಯಾಣದಲ್ಲಿ ಜರುಗಿದ ‘ರಂಗಭೂಮಿ, ಸಿನಿಮಾ ಮತ್ತು ಸಮಾಜ’ ಕುರಿತ ಉಪನ್ಯಾಸ.
“ನಾಟಕಗಳು ಮತ್ತು ರಂಗಭೂಮಿ ಜನರಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಬಿತ್ತುತ್ತವೆ ಹೊರತು ಬರೀ ಮನರಂಜನೆ ನೀಡುವುದಲ್ಲ. ಜಾತ್ಯತೀತ, ಧರ್ಮಾತೀತ, ಪಂಥಾತೀತವಾದ ಮೌಲ್ಯಗಳನ್ನು ಸಾರುವ ರಂಗಭೂಮಿ ಭಾರತೀಯತೆ ಪ್ರತಿಪಾದಿಸುತ್ತದೆ” ಎಂದು ಕಲಬುರಗಿ ರಂಗಾಯಣದ ಉಮೇಶ ಪಾಟೀಲ ಹೇಳಿದರು.
ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ‘ರಂಗಭೂಮಿ, ಸಿನಿಮಾ ಮತ್ತು ಸಮಾಜ’ ಕುರಿತ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡದರು. “ಮಾತನಾಡಲು, ಅಭಿವ್ಯಕ್ತಿಗೆ, ಪ್ರತಿಭೆಯ ಅನಾವರಣಕ್ಕೆ ರಂಗಭೂಮಿ ದಾರಿಯಾಗಿದೆ. ಮನುಷ್ಯ ಸಂಬಂಧಗಳನ್ನು ಜೀವಂತವಾಗಿಡುವ ಸಾಧ್ಯತೆಗಳು ರಂಗಭೂಮಿಯಿಂದ ಸಾಧ್ಯ. ರಂಗಭೂಮಿಯಲ್ಲಿ ಒಂದು ಪಾತ್ರ ಮಾಡಲು ಒಂದುವರೆ ತಿಂಗಳು ಕಾಲ ತಾಲೀಮು ಮಾಡಬೇಕಾಗುತ್ತದೆ. ಥಿಯೇಟರ್ ತಾಲೀಮು ಮಾಡುತ್ತಾ ಪಾತ್ರದ ಬದುಕು ನಟನ ಬದುಕಿಗೆ ಹತ್ತಿರವಾಗುತ್ತದೆ” ಎಂದರು.
“ಪ್ರಾಯೋಗಿಕ ಹಾಗೂ ಕಲಾತ್ಮಕ ಚಿತ್ರಗಳು ಸಾಮಾಜಿಕ ಸಮಸ್ಯೆ ಹಾಗೂ ಸಮಾಜದ ಬಹುಮುಖ ಅನಾವರಣಗೊಳಿಸುತ್ತವೆ. ನಮ್ಮ ಪ್ರಗತಿ, ನಮ್ಮ ಬೆಳವಣಿಗೆಯ ಗ್ರಹಿಕೆಯನ್ನು ನಾವೇ ಕಂಡುಕೊಳ್ಳಬೇಕು. ನಮಗೇ ಕನ್ನಡಿಯಾಗಿ, ವಿಮರ್ಶೆಯ ಮಾರ್ಗವಾಗಿ ರಂಗಭೂಮಿ ಕೆಲಸ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪ್ರತಿಭಾವಂತರಿಗೆ ಪಠ್ಯತರ ಮತ್ತು ಸಹಪಠ್ಯ ಚಟುವಟಿಕೆಗಳು ಸೃಜನಶೀಲತೆಯನ್ನು ಹೊರಗೆಡಹಲು ಹೆಚ್ಚು ಅಗತ್ಯ. ಸಿನಿಮಾ ಮತ್ತು ರಂಗಭೂಮಿ ಎರಡರಲ್ಲಿ ಹೆಚ್ಚು ಭಿನ್ನತೆಗಳಿವೆ. ನಾಟಕ ಮತ್ತು ರಂಗಭೂಮಿ ಸಿನಿಮಾಗಿಂತ ಹೆಚ್ಚು ಪ್ರಯೋಗಶೀಲವಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಸಾಮಾನ್ಯನ್ನನ್ನು ಒಳಗೊಳ್ಳುವಿಕೆಯ ಗುಣವಿರುವ ನಾಟಕಗಳು ನೆಲ ಸಂಸ್ಕೃತಿಯ ಚಿಂತನೆ ಹೊಂದಿವೆ. ಸಾಮಾಜಿಕ ಸಂಕೀರ್ಣತೆಗಳನ್ನು ದಾಟಲು ಕತೆ, ವಸ್ತು, ಪರಿಕರ, ಅಭಿನಯಗಳಿಂದ ಹೊಸ ತಿಳುವಳಿಕೆ ನೀಡುತ್ತವೆ. ರಂಗಭೂಮಿ ಜನತೆಯನ್ನು ಸದಾ ಕಾಲ ಎಚ್ಚರದಿಂದಿಡುತ್ತದೆ. ಸಿನಿಮಾ ಎಷ್ಟೇ ಪರಿಣಾಮಕಾರಿ ಮಾಧ್ಯಮವಾದರು ನಾಟಕದ ಜೀವಂತಿಕೆ ಸಿನಿಮಾಕ್ಕೆ ಬರುವುದಿಲ್ಲ. ಭಾರತೀಯ ರಂಗಭೂಮಿಯಲ್ಲಿ ಸಕ್ರಿಯರಾದ ಹಲವು ಕಲಾವಿದರು ಸಿನಿಮಾ ಲೋಕದಲ್ಲಿ ಪ್ರಸಿದ್ದಿಗೆ ಬಂದಿದ್ದಾರೆ. ಬೀದಿ ನಾಟಕ, ಹವ್ಯಾಸಿ ನಾಟಕ, ಜನಪದ ರಂಗಭೂಮಿ ಜನ ಚಳುವಳಿಯನ್ನು ಕಟ್ಟಲು ದಾರಿಯಾಗಿವೆ. ಲಂಕೇಶ್ ರ ‘ಸಂಕ್ರಾಂತಿ’, ಕಾರ್ನಾಡರ ‘ತಲೆದಂಡ’ ಕಲಬುರಗಿಯವರು ‘ಕೆಟ್ಟಿತ್ತು ಕಲ್ಯಾಣ’ ಶಿವಪ್ರಕಾಶರ ‘ಮಹಾಚೈತ್ರ’, ನಟರಾಜ ಹುಳಿಯಾರರ ‘ಮುಂದಣ ಕಥನ’ ಮೊದಲಾದ ನಾಟಕಗಳಿಗೆ ಶರಣ ಚಳುವಳಿ ಮತ್ತು ಬಸವಕಲ್ಯಾಣವೇ ವಸ್ತುವಾಗಿದೆ” ನುಡಿದರು.
ಈ ಸಂದರ್ಭದಲ್ಲಿ ರಂಗಾಯಣದ ನಟ ಉಮೇಶ ಪಾಟೀಲ ಅವರು ‘ಪುರಂದರದಾಸರು’, ‘ಐನ್ಸ್ಟೈನ್,’ ಮೊದಲಾದ ನಾಟಕದ ಏಕಪಾತ್ರಾಭಿನಯವನ್ನು ಮಾಡಿ ವಿದ್ಯಾರ್ಥಿಗಳ ಮನಸೂರೆಳಿಸಿದರು.
ಕಾರ್ಯಕ್ರಮದಲ್ಲಿ ಸಂಗೀತಾ ಮಹಾಗಾಂವೆ, ಗುರುದೇವಿ ಕಿಚಡೆ, ಸೌಮ್ಯ ಕರಿಗೌಡ, ನೀಲಮ್ಮ ಮೇತ್ರೆ, ರೋಷನ್ ಬೀ, ಮಾಲಾಶ್ರೀ ತಾಂಬೋಳೆ, ವಿವೇಕಾನಂದ ಶಿಂದೆ ಇದ್ದರು. ಶ್ರೀನಿವಾಸ ಉಮಾಪುರೆ ಸ್ವಾಗತಿಸಿದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.