ಜಸ್ಟೀಸ್ ನಾಗಮೋಹನದಾಸ್ ಒಳಮೀಸಲಾತಿ ವರದಿಯಲ್ಲಿ ಕೆಲವು ನ್ಯೂನ್ಯತೆ ಇರುವುದು ಕಂಡು ಬರುತ್ತಿದ್ದು, ಸರಕಾರ ಅದನ್ನು ಸರಿಪಡಿಸಬೇಕು. ಏಕಸದಸ್ಯ ಪೀಠವು 5 ಗುಂಪುಗಳನ್ನಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿದೆ. ಇದರಲ್ಲಿ ಬಲಗೈ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಒಳಮೀಸಲಾತಿ ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದೆ’ ಎಂದು ಗಂಗಾವತಿ ವಕೀಲ ವೀರೇಶ್ ಇಳಗನೂರು ವರದಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬಲಗೈ ಸಮುದಾಯ ಯಾರ ಹಕ್ಕನ್ನು ಪ್ರಶ್ನಿಸದೇ, ವಿರೋಧ ಮಾಡದೇ ನಮ್ಮ ಹಕ್ಕಿಗಾಗಿ ಹೋರಾಟ ಮಾಡಲು ಸದಾ ಸಿದ್ದರಿದ್ದೇವೆ. ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಅವರ ಅಧ್ಯಕ್ಷತೆಯ ಒಳ ಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವು ಆಗಸ್ಟ 4ರಂದು ಸರಕಾರಕ್ಕೆ ಒಳ ಮೀಸಲಾತಿ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಹೊಲೆಯ ಜಾತಿಗೆ ಸಂಬಂಧಿಸಿದ ಛಲವಾದಿ, ಪರಯ, ಪರೈಯಾನ್ ಹಾಗೂ ಬಲಗೈ ಜಾತಿಗೆ ಸೇರಿದ ಇನ್ನಿತರ ಜಾತಿಗಳನ್ನ ಒಟ್ಟಿಗೆ ಸೇರಿಸದೇ ಪ್ರತ್ಯೇಕವಾಗಿ ವಿಂಗಡಿಸಿ ವರದಿಯನ್ನು ಸಲ್ಲಿಸಿದೆ. ಹೊಲೆಯ ಸಂಬಂಧಿತ ಜಾತಿಗಳನ್ನು ಕಡಿಮೆ ಮಾಡಿ ಬಲಗೈ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿ ಕೇವಲ 5% ಮೀಸಲಾತಿಯನ್ನು ನೀಡಲು ಹೊರಟಿರುವುದು ಬಲಗೈ ಸಮುದಾಯಕ್ಕೆ ಅನ್ಯಾಯವನ್ನು ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದಿರುತ್ತದೆ” ಎಂದು ಆರೋಪಿಸಿದ್ದಾರೆ.
ಆದ್ದರಿಂದ ಇದೇ ತಿಂಗಳ ಆಗಸ್ಟ್ 16 ರಂದು ನಡೆಯುವ ಸಚಿವ ಸಂಪುಟದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇದರ ಸರಿ ತಪ್ಪುಗಳ ಬಗ್ಗೆ ಸಂಪೂರ್ಣ ಚರ್ಚೆ ಮಾಡಬೇಕು. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಇರುವ ಹೊಲೆಯ, ಛಲವಾದಿ, ಪರಯ, ಪರೈಯಾನ್ ಇನ್ನಿತರ ಬಲಗೈ ಸಂಬಂಧಿತ ಜಾತಿಗಳನ್ನು ಒಟ್ಟಿಗೆ ಸೇರಿಸಿ ಅಂಕಿ ಅಂಶಗಳನ್ನು ಬಿಡುಗಡೆ ಮಾಡಬೇಕು. ಅಲ್ಲದೇ ನೂರಾರು ವರ್ಷಗಳ ಕಾಲ ಬಲಗೈ ಸಮುದಾಯವು ಅನುಭವಿಸಿಕೊಂಡು ಬಂದಿರುವ ಸಾಮಾಜಿಕ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಗಳನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಮತ್ತು ನಮ್ಮ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಏಳಿಗೆಗೆ ಅನುವು ಮಾಡಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಪ್ರಚೋದನಾಕಾರಿ ಹೇಳಿಕೆ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲು
ಒಂದು ವೇಳೆ ಸರಕಾರವು ಬಲಗೈ ಸಮುದಾಯದ ಆಗ್ರಹ ಗಮನಕ್ಕೆ ತೆಗೆದುಕೊಳ್ಳದೇ ವರದಿಯನ್ನ ಯಥಾವತ್ತಾಗಿ ಜಾರಿ ಮಾಡಲು ಮುಂದಾದರೆ ಮುಂದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ವೀರೇಶ್ ಇಳಗನೂರು ಎಚ್ಚರಿಕೆ ನೀಡಿದ್ದಾರೆ.
