ಸತತ 3 ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೊಪ್ಪಳದ ಭಾಗ್ಯನಗರ ಕುವೆಂಪು ವೃತ್ತ ಒಜನ್ಹಳ್ಳಿಯ ರಸ್ತೆಯ ತುಂಬಾ ಚರಂಡಿ ನೀರು ತುಂಬಿಕೊಂಡಿದ್ದು, ವಾಹನ ಸವಾರರ ಸಂಚಾರಕ್ಕೆ ಅಡೆತಡೆಯಾಗಿದೆ.
ಹಲವು ಭಾಗ್ಯನಗರದ ಸಾರ್ವಜನಿಕರು ಹಾಗೂ ಹೋರಾಟಗಾರರು ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಾಗೂ ಶಾಸಕ ಸಂಸದರ ಗಮನಕ್ಕೆ ತರಲಾಗಿದ್ದು, ಹಲವಾರು ಮಾಧ್ಯಮಗಳು ಈ ಕುರಿತು ಸುದ್ದಿ ಮಾಡಿದರೂ ಕೂಡ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲವೆಂದು ಒಜನ್ಹಳ್ಳಿ ರಸ್ತೆಯಲ್ಲಿ ಸಂಚರಿಸುಚ ವಾಹನ ಸವಾರರು ಹಾಗೂ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಪ್ರತಿವರ್ಷ ಮುಂಗಾರು ಹಾಗೂ ಹಿಂಗಾರು ಮಳೆಯಾದರೆ ಇದೇ ಪರಿಸ್ಥಿತಿ ಎದುರಾಗುತ್ತದೆ. ಮಳೆಯ ರಭಸಕ್ಕೆ ವಾಹನಗಳ ದಟ್ಟಣೆಗೆ ರಸ್ತೆ ಗುಂಡಿಗಳು ಬಿದ್ದು ದ್ವಿಚಕ್ರ ವಾಹನ ಸಂಚಾರಕ್ಕೂ ಅಡೆತಡೆಯಾಗುತ್ತದೆ. ರಸ್ತೆಯ ಎರಡೂ ಬದಿಯಲ್ಲಿ ಬಹುಮುಖ್ಯವಾಗಿ ಚರಂಡಿ ವ್ಯವಸ್ಥೆ ಇಲ್ಲ. ನೀರು ಮನೆಗೆ ನುಗ್ಗುವುದಕ್ಕೆ ಇದೇ ಕಾರಣ. ಆದರೂ ಕೂಡ ಯಾವುದೇ ಜನಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ” ಎಂದು ಸ್ಥಳೀಯ ಯುವಕನೊಬ್ಬ ಬೇಸರ ವ್ಯಕ್ತಪಡಿಸಿದ್ದಾನೆ.
ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಬಸವರಾಜ್ ಶೀಲವಂತರ ಮಾತನಾಡಿ, “ಭಾಗ್ಯನಗರ ಪಟ್ಟಣ ಪಂಚಾಯಿತಿ ಆಡಳಿತಕ್ಕೊಳಪಟ್ಟಿದೆ. ಹಲವಾರು ಸಲ ರಸ್ತೆ ದುರವಸ್ತೆಯ ಕುರಿತು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಾಕಷ್ಟು ಬಾರಿ ಮಾಧ್ಯಮದಲ್ಲೂ ಸುದ್ಧಿ ಮಾಡಲಾಗಿದೆ. ಆದರೂ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಶಾಸಕ, ಸಂಸದರ ಕಣ್ಣಿಗೆ ಭಾಗ್ಯನಗರದ ದೌರ್ಭಾಗ್ಯ ಸ್ಥಿತಿ ಕಾಣಿಸುತ್ತಿಲ್ಲ. ಪಟ್ಟಣ ಪಂಚಾಯಿತಿಗೆ ಇವತ್ತೂ ಪೋನ್ ಕರೆ ಮಾಡಿ ಹೇಳಿರುವೆ. ಏನು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ತುಳು ಭಾಷೆಗೆ ಶೀಘ್ರ ಅಧಿಕೃತ ಸ್ಥಾನಮಾನ ಲಭಿಸಲಿ: ಚಂದ್ರಕಲಾ ನಂದಾವರ
ಒಜನ್ಹಳ್ಳಿ ರಸ್ತೆಯ ರವಿ ಮಾತನಾಡಿ, “ಮಳೆ ಆದಾಗಲೆಲ್ಲ ಭಾಗ್ಯನಗರದ್ದು ಇದೇ ಪರಿಸ್ಥಿತಿ ನೋಡಿ. ಚರಂಡಿ ಹೂಳು ಎತ್ತದಿರುವ ಕಾರಣದಿಂದ ಮಳೆ ನೀರೆಲ್ಲ ರಸ್ತೆಯ ಮೇಲೆ ಹರಿದು ಮನೆಗಳಿಗೂ ನುಗ್ಗಿದೆ. ಅಲ್ಲದೆ ಗುಂಡಿಬಿದ್ದಿರುವ ರಸ್ತೆಯಲ್ಲಿನ ನೀರಿನಿಂದ ಕೆರೆಯಂತಾಗಿದೆ. ಯಾವ್ಯಾವುದೋ ನದಿಗಳಿಗೆ ಹೋಗಿ ಬಾಗಿನ ಅರ್ಪಿಸಿ ಬರುವ ಶಾಸಕ ಹಾಗೂ ಸಂಸದರು ಭಾಗ್ಯನಗರದ ಸ್ಥಿತಿ ನೋಡಿ ಇಲ್ಲಿಯೇ ಬಾಗಿನ ಅರ್ಪಿಸಬೇಕೆಂದು ನಮ್ಮ ಬಡವಾಣೆಯ ಜನರೆಲ್ಲ ಸೇರಿ ಪಟ್ಟಣ ಪಂಚಾಯಿತಿಗೆ ವಿನಂತಿಸಿಕೊಳ್ಳುತ್ತಿದ್ದು, ಅವರಿಗೆ ಆಹ್ವಾನ ನೀಡುತ್ತಿದ್ದೇವೆ” ಎನ್ನುತ್ತ ಆಕ್ರೋಶ ವ್ಯಕ್ತಪಡಿಸಿದರು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್