ನರೇಗಾ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನೊಬ್ಬ ಕಾಲು ಜಾರಿ ಕಾಲುವೆಗೆ ಬಿದ್ದು ನೀರಲ್ಲಿ ಕೊಚ್ಚಿ ಹೋದ ಘಟನೆ ಕೊಪ್ಪಳ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‌ನಲ್ಲಿ ನಿನ್ನೆ ನಡೆದಿದೆ.
ಬಸವೇಶ್ವರ ಕ್ಯಾಂಪ್ ನಿವಾಸಿ ಹನುಮಂತಪ್ಪ ಆದಾಪುರ ಕೊಚ್ಚಿಹೋದ ಕಾರ್ಮಿಕನೆಂದು ಗುರುತಿಸಲಾಗಿದೆ.
ಕ್ಯಾಂಪ್‌ನಲ್ಲಿರುವ ನಾಲಾದಲ್ಲಿ ಕಳೆದ 7 ದಿನಗಳಿಂದ ಹೂಳೆತ್ತುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಆದಾಪುರ ಪಕ್ಕದಲ್ಲಿಯೇ ಇರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಹೋಗುವಾಗ ಜಾರಿ ನೀರಿಗೆ ಬಿದ್ದಿದ್ದಾನೆ. ಗಮನಿಸಿದ ಯುವಕರು ಹನುಮಂತಪ್ಪನನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ನೀರಿನ ರಭಸಕ್ಕೆ ಹನುಮಂತಪ್ಪ ಕೊಚ್ಚಿ ಹೋಗಿದ್ದಾನೆ.

ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಖಚಿತಪಡಿಸಿಕೊಂಡಿದ್ದಾರೆ. ತೆಪ್ಪದ ಮೂಲಕ ಕೊಚ್ಚಿ ಹೋದ ಹನುಮಂತಪ್ಪನನ್ನು ಹುಡುಕಲಾಗುತ್ತಿದೆ ಎಂದು ಪಿಡಿಒ ಲಕ್ಷ್ಮಣ ತಿಳಿಸಿದ್ದಾರೆ. ದುಃಖದಲ್ಲಿರುವ ಕುಟುಂಬಸ್ಥರಿಗೆ ತಾಪಂ ಇಒ ಕೆ. ರಾಜಶೇಖರ್ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ.
ಕಾಲುವೆಯಲ್ಲಿ ಜಾರಿ ಬಿದ್ದು ನೀರು ಪಾಲಾದ ವ್ಯಕ್ತಿಯ ಮೃತದೇಹವೇ ಸಿಕ್ಕಿಲ್ಲ. ತೆಪ್ಪದ ಮೂಲಕ ಪತ್ತೆಗೆ ಗ್ರಾಪಂ ಆಡಳಿತ ಮಂಡಳಿ ಮುಂದಾಗಿದೆ. ಈ ನಡುವೆ ನರೇಗಾ ಕಾರ್ಮಿಕರು ತಾಪಂ ಇಒ ರಾಜಶೇಖರಗೆ ಪರಿಹಾರ ಧನ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ | ಪ್ರವಾಸಿಗರಿಗೆ ರಕ್ಷಣೆ ಇಲ್ಲ; ಎಲ್ಲಾ ಸಮಸ್ಯೆಗೂ ಹೆಣ್ಣನ್ನು ದೂಷಿಸುವುದು ಸರಿಯೇ?
ಈ ವೇಳೆ ಗಂಗಾವತಿ ಗ್ರಾಮೀಣ ಠಾಣೆ ಪಿಎಸ್‌ಐ ವೆಂಕಟೇಶ ಚವ್ಹಾಣ, ತಾಪಂ ಸಹಾಯಕ ನಿರ್ದೇಶಕಿ ಶೆರಪೊನ್ನಿಸಾ ಬೇಗಂ, ಜೆಇ ಕೊಟ್ರೇಶ ಇದ್ದರು.
