ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ರೇಷ್ಮಾ ಬೇಗಂ ವಡ್ಡಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಯೋಗ ಪ್ರದರ್ಶನ ನೀಡಲಿದ್ದಾರೆ.
ರೇಷ್ಮಾ ಬೇಗಂ ವಡ್ಡಟ್ಟಿ ಅವರು ಕಾಮನೂರಿನ ಆಯುರ್ವೇದ ಕ್ಷೇಮ ಕೇಂದ್ರದ ಆಸ್ಪತ್ರೆಯಲ್ಲಿ ಯೋಗ ಶಿಕ್ಷಕಿ ಹಾಗೂ ತರಬೇತಿದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಕೂಡ ಯೋಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ವಿಶ್ವ ವಿದ್ಯಾಲಯದಲ್ಲಿ ಯೋಗದಲ್ಲಿ ಉನ್ನತ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ.
ಈದಿನ ಜೊತೆ ಮಾತನಾಡಿದ ರೇಷ್ಮಾ, “ಸುಮಾರು 04 ವರ್ಷಗಳಿಂದ ಪ್ರತಿದಿನವೂ ಯೋಗ ಕ್ಷೇಮ ಚಟುವಟಿಕೆಗಳು ನಡೆಸುತ್ತಾ ಬಂದಿದ್ದೇನೆ. ದಿನವೂ ಸಾರ್ವಜನಿಕರು ಭಾಗವಹಿಸುತ್ತಾರೆ. ಅನಾರೋಗ್ಯದಿಂದ ನರಳುತ್ತಿರುವ ಸಾರ್ವಜನಿಕರು ಯೋಗ ಕ್ಷೇಮ ತರಬೇತಿಯಲ್ಲಿ ಪಾಲ್ಗೊಂಡು ಆರೋಗ್ಯವಾಗಿ ಸದೃಢರಾಗಿದ್ದಾರೆ” ಎಂದು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಯೋಗಾಭ್ಯಾಸದಲ್ಲಿ ತೊಡಗಿರುವ ರೇಷ್ಮಾ, ಅನೇಕ ಪ್ರಶಸ್ತಿಗಳನ್ನು ಹಾಗೂ ಪುರಸ್ಕಾರಗಳನ್ನು ಪಡೆದಿದ್ದಾರೆ. ದೆಹಲಿಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ರೇಷ್ಮಾ ಬೇಗಂ ವಡ್ಡಟ್ಟಿ ಅವರಿಗೆ ರಾಜ್ಯ ಆಯುಷ್ ಇಲಾಖೆ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪಾಲಕರು, ಗ್ರಾಮಸ್ಥರು ಹಾಗೂ ಸ್ನೇಹಿತರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.