ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಹೆಚ್ಚಿನ ರೈತರು ದಶಕದಿಂದ ರೇಷ್ಮೆ ಬೆಳೆಯುತ್ತಿದ್ದು, ರೇಷ್ಮೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸದ್ಯ ಇರುವ ರೇಷ್ಮೆ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಇದು ರೇಷ್ಮೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರೇಷ್ಮೆ ಮೊಟ್ಟೆಗಳಲ್ಲಿ ಗೋಲ್ಮಾಲ್ ಆಗುತ್ತಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯ ರೈತರು ಆರೋಪಿಸುತ್ತಿದ್ದಾರೆ.
ಹೊಸಳ್ಳಿ ಗ್ರಾಮದ ರೈತರು ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಗುವ ರೇಷ್ಮೆ ಹುಳುಗಳನ್ನು ತಂದು ಪೋಷಿಸಿ, ಅವು ಗೂಡು ಕಟ್ಟಿದ ನಂತರ ರಾಮನಗರ ಸೇರಿದಂತೆ ಅನೇಕ ಕಡೆ ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ತಂದಿರುವ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಇದರಿಂದ ರೇಷ್ಮೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಮೊಟ್ಟೆಯಿಂದ ಹೊರಬಂದ ಹುಳುಗಳು ಇಪ್ಪತ್ತು ದಿನಗಳವರಗೆ ಇರುತ್ತವೆ. ನಂತರ ಅವುಗಳು ಗೂಡು ಕಟ್ಟಲು ಆರಂಭ ಮಾಡುತ್ತವೆ. ಇದೀಗ ಮೊಟ್ಟೆಯಿಂದ ಹೊರಬಂದ ಹುಳುಗಳು ಇಪ್ಪತ್ತೈದು ದಿನಗಳು ಕಳೆದ್ರು ಕೂಡ ಗೂಡು ಕಟ್ಟುತ್ತಿಲ್ಲ. ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ.
ಇದೀಗ ಹುಳುಗಳು ಗೂಡು ಕಟ್ಟದೇ ಇರುವುದು, ರೈತರ ಪ್ರಮುಖ ಆದಾಯದ ಬೆಳೆ ಹಾಳಾದಂತೆ. ಬೆಳೆ ಹಾಳಾದರೆ ತಮ್ಮ ಬದುಕು ಮೂರಾಬಟ್ಟಿಯಾಗುತ್ತದೆ ಎನ್ನುವ ಆತಂಕ ರೈತರದ್ದು. ಒಬ್ಬ ರೈತ ಎರಡೇ ಎಕರೆ ಪ್ರದೇಶದಲ್ಲಿ ಹಿಪ್ಪು ನೆರಳೆ ಬೆಳದಿದ್ರೆ, ಪ್ರತಿ ತಿಂಗಳಿಗೆ ಕನಿಷ್ಟ ಒಂದು ಕ್ವಿಂಟಲ್ ರೇಷ್ಮೆ ಗೂಡು ಸಿಗುತ್ತದೆ. ಪ್ರತಿ ಕಿಲೋಗೆ ಐನೂರು ರೂಪಾಯಿ ಮಾರಾಟವಾದ್ರು ಕೂಡ ಐವತ್ತು ಸಾವಿರ ಹಣ ಸಿಗುತ್ತಿತ್ತು. ಖರ್ಚು ಕಳೆದ್ರು ಕೂಡ ನಲವತ್ತು ಸಾವಿರ ಹಣ ಉಳಿಯುತ್ತಿತ್ತು. ಆದರೆ, ಈ ಬಾರಿ ಖರ್ಚು ಇಲ್ಲ, ಲಾಭವು ಇಲ್ಲ ಎಂದು ಕೊರಗುತ್ತಿದ್ದಾರೆ ರೈತರು.
ಮೊಟ್ಟೆಗಳ ಗೋಲ್ಮಾಲ್ನಿಂದಾಗಿ ಹುಳುಗಳು ಗೂಡು ಕಟ್ಟುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಮೊಟ್ಟೆಗಳನ್ನು ತಂದು, ಅವುಗಳನ್ನು ಮರಿ ಮಾಡುವ ಕೆಲಸ ನಿರ್ವಹಿಸುವ ಜನ, ಉತ್ತಮ ಗುಣಮಟ್ಟದ ಮೊಟ್ಟೆಗಳನ್ನು ತರದೆ, ಹಣದಾಸೆಗಾಗಿ ಕಳಪೆ ಮೊಟ್ಟೆಗಳನ್ನು ತಂದು, ಮರಿ ಮಾಡಿ ಅವುಗಳನ್ನು ರೈತರಿಗೆ ನೀಡುತ್ತಿದ್ದಾರೆ. ಹೀಗಾಗಿ ಹುಳುಗಳು ಗೂಡು ಕಟ್ಟುತ್ತಿಲ್ಲ ಎನ್ನುತ್ತಿದ್ದಾರೆ ರೈತರು. ಈ ಬಗ್ಗೆ ರೇಷ್ಮೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಕೂಡ ತಂದಿದ್ದೇವೆ. ಆದರೆ, ಅವರು ಪುಡ್ ಪಾಯ್ಸನ್ ಅಂತ ಹೇಳ್ತಿದ್ದಾರೆ. ಹಾಗಂತ ಯಾವುದೇ ಹುಳುಗಳನ್ನು ತಗೆದುಕೊಂಡು ಹೋಗಿ ಪರೀಕ್ಷೆ ಮಾಡಿಲ್ಲಾ. ಬದಲಾಗಿ ಸುಮ್ಮನೇ ಹೇಳುತ್ತಿದ್ದಾರೆ. ರೇಷ್ಮೆ ಹುಳುಗಳನ್ನು ನೀಡೋರ ವಿರುದ್ದ ಕಠೀಣ ಕ್ರಮ ಕೈಗೊಳ್ಳಬೇಕು. ನಮಗೆ ಪರಿಹಾರ ನೀಡಬೇಕು ಎಂದು ರೇಷ್ಮೆ ಬೆಳೆದ ರೈತರು ಆಗ್ರಹಿಸುತ್ತಿದ್ದಾರೆ.
ರೇಷ್ಮೆ ಇಲಾಖೆಯ ಅಧಿಕಾರಿಗಳು, ವಾತಾವರಣದಲ್ಲಿ ಬದಲಾವಣೆ ಮತ್ತು ರೇಷ್ಮೆಗೆ ಬೇಕಾಗಿರುವ ಹಿಪ್ಪು ನೆರಳೆ ಸೊಪ್ಪಿಗೆ ಕೆಲ ಕೆಮಿಕಲ್ಗಳ ಬಳಕೆ ಮಾಡುತ್ತಿರುವುದು ಕಾರಣ ಎನ್ನುತ್ತಿದ್ದಾರೆ. ಜೊತೆಗೆ ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಸಾಕಷ್ಟು ಕೆಮಿಕಲ್ಗಳ ಬಳಕೆ ಮಾಡುತ್ತಿದ್ದಾರೆ. ಅದು ಗಾಳಿಯ ಮೂಲಕ ಹಿಪ್ಪು ನೆರಳೆ ಸೊಪ್ಪಿನ ಮೇಲೆ ಬೀಳುತ್ತಿದೆ. ಕೆಮಿಕಲ್ ಸೇರಿರುವ ಹಿಪ್ಪು ನೆರಳೆ ಸೊಪ್ಪನ್ನು ತಿನ್ನುವುದರಿಂದ ಹುಳುಗಳು ಗೂಡು ಕಟ್ಟುತ್ತಿಲ್ಲ. ಪ್ರತಿ ವರ್ಷ ಹೆಚ್ಚು ಮಳೆ ಯಾಗುತ್ತಿತ್ತು. ನೀರಲ್ಲಿ ಕೆಮಿಕಲ್ ಹೋಗ್ತಿತ್ತು. ಆದ್ರೆ, ಈ ಬಾರಿ ಮಳೆ ಕಡಿಮೆಯಾಗಿದೆ ಎನ್ನುತ್ತಿದ್ದಾರೆ.
ರೇಷ್ಮೆ ಹುಳುಗಳ ಸಾವಿಗೆ ಅಧಿಕಾರಿಗಳು, ರೇಷ್ಮೆ ವಿಜ್ಞಾನಿಗಳು ಅಸಲಿ ಕಾರಣ ಪತ್ತೆ ಹಚ್ಚಿ, ಹುಳುಗಳನ್ನು ಮಾರಾಟ ಮಾಡೋ ವರ್ತಕರ ನಿರ್ಲಕ್ಷ್ಯಇದ್ದರೆ ಅವರ ವಿರುದ್ಧ ಕ್ರಮ ಕೈಗೊಂಡು, ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೇಷ್ಮೆ ಬೆಳೆದ ರೈತರು ಆಗ್ರಹಿಸುತ್ತಿದ್ದಾರೆ.