ಕೊಪ್ಪಳ ತಾಲೂಕಿನ ಮಾದಿನೂರು ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯಪಾನದಿಂದ ಕುಟುಂಬಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾದಿನೂರು ಗ್ರಾಮದ ಮಹಿಳೆಯರು ತಹಸೀಲ್ದಾರ್ಗೆ ಮದ್ಯಪಾನ ಮುಕ್ತ ಮಾದಿನೂರು ಗ್ರಾಮ ರೂಪಿಸಲು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಮದ್ಯಪಾನದಿಂದಾಗಿ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ನೆಮ್ಮದಿಯ ಜೀವನಕ್ಕೆ ತೊಂದರೆಯಾಗುತ್ತಿದೆ. ಯುವಜನರ ಮೇಲೂ ಇದರ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಂಡು, ಮದ್ಯಪಾನಕ್ಕೆ ಕಡಿವಾಣ ಹಾಕುವಂತೆ ಮಹಿಳೆಯರು ಒತ್ತಾಯಿಸಿದರು.
“ಮಹಿಳೆಯರ ಸುರಕ್ಷತೆ, ಕುಟುಂಬಗಳ ನೆಮ್ಮದಿ ಹಾಗೂ ಗ್ರಾಮದ ಆರೋಗ್ಯಕರ ಸಾಮಾಜಿಕ ವಾತಾವರಣಕ್ಕಾಗಿ ಮಾದಿನೂರು ಗ್ರಾಮವನ್ನು ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾದಿನೂರು ಗ್ರಾಮದ ಮಹಿಳೆಯರು ಹಾಗೂ ಸಾಮಾಜಿಕ ಯುವ ಹೋರಾಟಗಾರ ಕಾಶಿಂ ಕೆ ಎನ್ ನಾಗೇಶನಹಳ್ಳಿ, ಮೈಲಪ್ಪ ಮಾದಿನೂರು ಹಾಗೂ ನಿಂಗಪ್ಪ ಪೂಜಾರ್ ಉಪಸ್ಥಿತರಿದ್ದರು.





