‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ವಾಯುಪಡೆಯ ನೇತೃತ್ವ ವಹಿಸಿದ್ದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮೊದಲ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಬುಧವಾರ ನೇಮಿಸಲಾಗಿದೆ. 2026ರ ಏಪ್ರಿಲ್ನಲ್ಲಿ ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿರುವ ಈ ಹಿರಿಯ ಅಧಿಕಾರಿ, ಇನ್ನು ಮುಂದೆ ರಾಮಮಂದಿರ ಟ್ರಸ್ಟ್ನ ಆಡಳಿತಾತ್ಮಕ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಮಿಶ್ರಾ ಅವರು ತೋರಿದ ಸಾಧನೆ ಗುರುತಿಸಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವರಿಗೆ ‘ಸರ್ವೋತ್ತಮ ಯುದ್ಧ ಸೇವಾ ಪದಕ’ ನೀಡಿ ಗೌರವಿಸಿದ್ದರು. ಯುದ್ಧ ಅಥವಾ ಸಂಘರ್ಷದ ಸಮಯದಲ್ಲಿ ಸಲ್ಲಿಸುವ ಅತ್ಯುನ್ನತ ಸೇವೆಗಾಗಿ ನೀಡಲಾಗುವ ಈ ಪದಕವು, ಭಾರತದ ಅತ್ಯಂತ ಅಪರೂಪದ ಸೇನಾ ಪುರಸ್ಕಾರಗಳಲ್ಲಿ ಒಂದಾಗಿದೆ. ಕಾರ್ಯಾಚರಣೆಯ ಯೋಜನೆ, ಸಮನ್ವಯ, ಲಾಜಿಸ್ಟಿಕ್ಸ್ ಮತ್ತು ಬೃಹತ್ ಪಡೆಗಳನ್ನು ಮುನ್ನಡೆಸಿದ ದೀರ್ಘಕಾಲದ ಅನುಭವ ಹೊಂದಿರುವ ಹಿರಿಯ ಅಧಿಕಾರಿಯೊಬ್ಬರು ಇದೀಗ ಟ್ರಸ್ಟ್ಗೆ ನೇಮಕವಾದಂತಾಗಿದೆ.
ಉತ್ತರ ಪ್ರದೇಶದೊಂದಿಗೆ ನಿಕಟ ನಂಟು ಹೊಂದಿರುವ ಮಿಶ್ರಾ ಅವರು, ಮೂಲತಃ ಅಯೋಧ್ಯೆಯಿಂದ ರಸ್ತೆ ಮಾರ್ಗವಾಗಿ ಸುಮಾರು ಮೂರು ಗಂಟೆಗಳ ಪ್ರಯಾಣದ ದೂರದಲ್ಲಿರುವ ದೇವ್ರಿಯಾ (Deoria) ಜಿಲ್ಲೆಯ ಭೋಪತ್ಪುರ ಗ್ರಾಮದವರು. ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಇವರ ತಂದೆ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರು.
ರಾಮಮಂದಿರ ಟ್ರಸ್ಟ್ನ ಸಿಇಒ ಆಗಿ, ಜಿತೇಂದ್ರ ಮಿಶ್ರಾ ಅವರು ಇನ್ನು ಮುಂದೆ ಮಂದಿರದ ದೈನಂದಿನ ಆಡಳಿತ, ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳ ನಿರ್ವಹಣೆ, ಹಣಕಾಸು ವ್ಯವಸ್ಥೆ, ಸಿಬ್ಬಂದಿ ಸಮನ್ವಯ, ಭದ್ರತಾ ಉಸ್ತುವಾರಿ ಮತ್ತು ಬೃಹತ್ ಧಾರ್ಮಿಕ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಯ ಜವಾಬ್ದಾರಿಯನ್ನು ಹೊರಲಿದ್ದಾರೆ.





