ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕಗಳೂ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿ ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದ್ದಾರೆ. ಅವರು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
“ಇಂದಿನ ಪರಿಸ್ಥಿತಿಯಲ್ಲಿ ರೈತರು ಬದುಕುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಪಂಪ್ಸೆಟ್ ಸಲಕರಣೆಗಳನ್ನು ಉಚಿತವಾಗಿ ಕೊಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಸೆ.22ರಂದು ಆ ಬಗ್ಗೆ ಆದೇಶ ಹೊರಡಿಸಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಗಮನಕ್ಕೆ ಬಂದಿಲ್ಲವೆಂದು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಆ ಆದೇಶವನ್ನು ರದ್ದುಪಡಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರ ತನ್ನ ಆದೇಶ ರದ್ದುಪಡಿಸುವವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ. ಆದೇಶ ರದ್ದಾದರೆ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುತ್ತೇನೆ ಎಂದು ಅವರು ಹೇಳಿದ್ದಾರೆ.