ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಯಿಂದ ತುಂಬಿಹರಿಯುತ್ತಿದ್ದ ಹಳ್ಳದಲ್ಲಿ ಕುರಿಗಳು ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿಯಿದ್ದ ಹಳ್ಳದ ಪಕ್ಕದಲ್ಲಿ ಹನುಮಪ್ಪ ರಾಮಪ್ಪ ಚಲವಾದಿ ಎಂಬುವರ ಕುರಿದೊಡ್ಡಿ ಕಟ್ಟಿಕೊಂಡಿದ್ದರು. ದೊಡ್ಡಿಯಲ್ಲಿ ಸುಮಾರು 110 ಕುರಿಗಳನ್ನು ಸಾಕಿದ್ದರು. ಆದರೆ, ಹಳ್ಳ ತುಂಬಿ ಹರಿದ ಪರಿಣಾಮ, 40 ಕುರಿಗಳು ಕೊಚ್ಚಿಹೋಗಿವೆ ಎಂದು ತಿಳಿದುಬಂದಿದೆ.
ಕುಕುನೂರು ಪೊಲೀಸ್ ಠಾಣೆಯ ಪೊಲೀಸರು, ತಹಸಿಲ್ದಾರ್ ಮತ್ತು ಪಶು ಸಂಗೋಪನ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಸ್ಥಳಕ್ಕೆ ಧಾವಿಸಿ ಕುರಿಗಳ ಹುಡುಕಾಟ ನಡೆಸಿದ್ದಾರೆ. 21 ಕುರಿಗಳು ಸಿಕ್ಕಿದ್ದು, ಇನ್ನುಳಿದ ಕುರಿಗಳ ಹುಡುಕಾಟ ನಡೆಯುತ್ತಿದೆ ಎಂದು ತಹಸಿಲ್ದಾರ್ ಪ್ರಾಣೇಶ್ ತಿಳಿಸಿದ್ದಾರೆ.