ಕಾರ್ಖಾನೆಗಳು ಇಲ್ಲಿನ ನೆಲದ ಮೇಲೆ ಮೋಸದಿಂದ ಅತಿಕ್ರಮಣ ಮಾಡಿ ಫಲವತ್ತಾದ ಭೂಮಿಯನ್ನು ಮಧ್ಯವರ್ತಿಗಳ ಮೂಲಕ, ಬಲತ್ಕಾರದ ಭೂಸ್ವಾಧೀನ ಮಾಡಿಕೊಂಡು ದೌರ್ಜನ್ಯ ಎಸಗುತ್ತಿವೆ. ಇಂತಹ ಮಾಲಿನ್ಯಕಾರಿ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೊಟ್ಟ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಚಿತ್ರ ನಿರ್ದೇಶಕ, ಸಂಪಾದಕ ರಮೇಶ ಸುರ್ವೆ ಹೇಳಿದರು.
ಕೊಪ್ಪಳ ನಗರಸಭೆ ಮುಂದಿನ ಬಲ್ಡೋಟ ತೊಲಗಿಸಿ 170ನೇ ದಿನದ ಧರಣಿಯನ್ನು ಬೆಂಬಲಿಸಿ ಮಾತನಾಡಿದ ಅವರು,
“ಕಾರ್ಖಾನೆಗಳು ಇಲ್ಲಿನ ನೆಲದ ಮೇಲೆ ಮೋಸದಿಂದ ಅತಿಕ್ರಮಣ ಮಾಡಿ ಫಲವತ್ತಾದ ಭೂಮಿಯಲ್ಲಿ ರಸಾಯನ, ಗೊಬ್ಬರ, ಉಕ್ಕು, ಕಬ್ಬಿಣ, ಸ್ಪಾಂಜ್, ಐರನ್, ಸಿಮೆಂಟ್, ವಿದ್ಯುತ್ ಉತ್ಪಾದನೆ ಮಾಡುತ್ತಾ ಅಪಾಯಕಾರಿಯಾದ ವಿಷ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಇದರ ದೂಳು, ಹೊಗೆ, ಬೂದಿಯಿಂದ ಜನರ ಆರೋಗ್ಯ ಹದಗೆಟ್ಟಿದೆ. ಅತ್ತ ತುಂಗಭದ್ರಾ ನದಿಯ ನೀರೂ ವಿಷವಾಗಿದೆ. ಸರ್ಕಾರ ಇಂತಹ ಮಾಲಿನ್ಯಕಾರಿ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೊಟ್ಟದ್ದು ಘೋರ ಅನ್ಯಾಯದ ಕ್ರಮವಾಗಿದೆ. ಈ ವಸ್ತುಗಳು ಇಲ್ಲದಿದ್ದರೂ ನಡೆಯುತ್ತದೆ. ಆದರೆ ಅನ್ನ ಬೆಳೆಯುವ ಭೂಮಿಯಲ್ಲಿ ಕಬ್ಬಿಣ ಉತ್ಪಾದಿಸಿದರೆ ಅದನ್ನು ತಿನ್ನಲಾಗುತ್ತದೆಯೇ? ಆಡಳಿತದಲ್ಲಿರುವ ಸಿದ್ದರಾಮಯ್ಯ ಸರ್ಕಾರ ಇಲ್ಲಿನ ಎರಡು ಲಕ್ಷ ಜನರಿಗೆ ಅನ್ಯಾಯ ಮಾಡಲು ಸಾಧ್ಯವೇ? ಒಂದು ವೇಳೆ ಈ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚಿ ಈ ಜನರ ಜೀವ, ಆರೋಗ್ಯ ಕಾಪಾಡಲು ವಿಫಲವಾದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ಅನಿವಾರ್ಯವಾಗಿ ಪಾಠ ಕಲಿಸುತ್ತಾರೆ” ಎಂದು ಸರ್ಕಾರವನ್ನು ಎಚ್ಚರಿಸಿದರು.
ರಂಗನಿರ್ದೇಶಕ ಲಕ್ಷ್ಮಣ ಪಿರಗಾರ್ ಮಾತನಾಡಿ, “ಇಲ್ಲಿನ ಮುಂಚೂಣಿ ಹೋರಾಟದ ನೇತೃತ್ವ ವಹಿಸಿರುವ ಅಲ್ಲಮಪ್ರಭು ಬೆಟ್ಟದೂರು ಅವರು ನಾಡಿನ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ನಾವು ಅವರ ಮಾರ್ಗದರ್ಶನ ಪಡೆದು ರಂಗ ಚಟುವಟಿಕೆ ಮಾಡುತ್ತೇವೆ. ನಮ್ಮ ತಂಡದಿಂದ ಕೂಡ ನಾಟಕಗಳನ್ನು ಮಾಡಿ ಹೋರಾಟ ತೀವ್ರಗೊಳ್ಳಲು ಸೇವೆ ಮಾಡುತ್ತೇವೆ. ಲಕ್ಷಗಟ್ಟಲೆ ಜನರ ಭವಿಷ್ಯ ಇದರಲ್ಲಿದ್ದು ಜಾಗೃತರಾಗಿ ಬೀದಿಗೆ ಧುಮಿಕಿ ಪ್ರತಿಯೊಬ್ಬ ನಾಗರಿಕರು ಹೋರಾಡಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ: ಪೊಲೀಸರಿಂದ ಮಗು ರಕ್ಷಣೆ
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ರಾಜಶೇಖರ ಏಳುಬಾವಿ, ನರೇಂದ್ರ ಪಾಟೀಲ, ನಾಗರಾಜ ಕುಷ್ಟಗಿ, ಪಂಪಣ್ಣ ಚಿಂತಪಲ್ಲಿ, ಕಾಶಪ್ಪ ಚಲವಾದಿ, ಮಹಾದೇವಪ್ಪ ಮಾವಿನಮಡು, ವಿಜಯಮಹಾಂತೇಶ ಹಟ್ಟಿ, ಮಹಾಂತೇಶ ಕೊತಬಾಳ, ಶಿವಪ್ಪ ಹಲಗೇರಿ, ಬಸವರಾಜ ನರೇಗಲ್, ಗಾಳೆಷ್ಪ ಪೂಜಾರ ಹೂವಿನಾಳ, ಬಸವರಾಜಪ್ಪ ಶೆಟ್ಟರ್, ಶೆರಣು ಶೆಟ್ಟರ್, ಮಂಗಳೇಶ ರಾಠೋಡ, ಶರಣು ಪಾಟೀಲ, ಸಂಜಯದಾಸ್ ಕೌಜಗೇರಿ, ರಲಿಂಗಯ್ಯ ಶಾಸ್ತ್ರಿ, ಶಿವರಾಜ ಚಲವಾದಿ, ರತ್ನಮ್ಮ ದೊಡ್ಡಮನಿ ಇದ್ದರು.
170ನೇ ದಿನದ ಬಲ್ಡೋಟ ತೊಲಗಿಸಿ ಹೋರಾಟಕ್ಕೆ ರಂಗ ನಿರ್ದೇಶಕ ಪಿರಗಾರ್ ಬೆಂಬಲ





