ಮಲ್ಪೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ನಲ್ಲಿ ನಡೆದ ಅವ್ಯವಹಾರದ ಬಗ್ಗೆ ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಾ ಇದ್ದೇವೆ, ಕೇವಲ ಕೆಲವೇ ಕೆಲವು ನಾಯಕರು ಜಯಪ್ರಕಾಶ್ ಹೆಗಡೆ, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ಅವರು ಬೆಂಬಲ ನೀಡಿರುವುದು ಬಿಟ್ಟರೆ ಮತ್ತೆ ಎಲ್ಲಾ ಜಿಲ್ಲಾ ನಾಯಕರು ಮೌನದಲ್ಲಿ ಇರುವುದು ಕಂಡುಬರುತ್ತಿದೆ, ನಿಮ್ಮ ಮೌನವೇ ಬಿಜೆಪಿ ಶಾಸಕನಿಗೆ ವರವಾಗಿ ಪರಿಣಮಿಸಿದೆ, ಜಿಲ್ಲೆಯ ಜನತೆಗೆ ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಪಕ್ಷ ಹಿನ್ನಡೆ ಆದಲ್ಲಿ ಸಾರ್ವಜನಿಕ ವಲಯದಲ್ಲಿ ಪಕ್ಷಕ್ಕೂ ಹಾಗೂ ನಾಯಕರಿಗೂ ಹಿನ್ನಡೆ ಆಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೋರಾಟಗಾರರಾದ ನಮ್ಮನ್ನು ಬೇರೆ ಬೇರೆ ರೀತಿಯಲ್ಲಿ ತೇಜೋವದೆ ಮಾಡುತ್ತಿದ್ದು ಹೋರಾಟದ ಬಲವನ್ನು ಒಂದು ಕಡೆ ಕುಸಿಯಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಉತ್ತರ ಕನ್ನಡದ ಕರ್ನಾಟಕ ಸರ್ಕಾರದ ಮೀನುಗಾರಿಕಾ ಮಂತ್ರಿಗಳು ಉಡುಪಿ ಬಿಜೆಪಿ ಶಾಸಕ ಹಾಗೂ ಬಿಜೆಪಿ ನಾಯಕರಿಗೆ ಕೊಡೆ ಹಿಡಿದು ನಿಂತಿದ್ದಾರೆ, ಮೀನುಗಾರಿಕೆಯಲ್ಲಿ ಸಾಲು ಸಾಲು ಹಗರಣ ಮಹಾಲಕ್ಷ್ಮಿ ಬ್ಯಾಂಕಿನಲ್ಲಿ ಕೋಟಿ ಕೋಟಿ ಲೂಟಿ ಇದರ ವಿರುದ್ಧ ಹೋರಾಟಗಳು ನಡೆಯುತ್ತಿದ್ದರು ಮೀನುಗಾರಿಕೆ ಮಂತ್ರಿಗಳು ಕಾಂಗ್ರೆಸ್ ಕಾರ್ಯಕರ್ತರನ್ನು ಗಮನಕ್ಕೆ ತೆಗೆದುಕೊಳ್ಳದೆ ಬಿಜೆಪಿ ಮಾಜಿ ಸಚಿವರ ಕಾಲಿಗೆ ಬೀಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಿದಲ್ಲಿ ಮುಂದೆ ಕಾರ್ಯಕರ್ತನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬರಬಹುದು, ಉತ್ತರ ಕನ್ನಡ ಸಚಿವರು ಮಾಂಕಾಳ್ ವೈದ್ಯ ಅವರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪಕ್ಷ ಬಲಪಡಿಸಲು ಉಡುಪಿಗೆ ಬನ್ನಿ ಬಿಜೆಪಿ ಶಾಸಕ ಹಾಗೂ ಬಿಜೆಪಿ ನಾಯಕರನ್ನು ಸೆಳೆಯಲು ನೀವು ಉಡುಪಿಗೆ ಬರುವುದು ಬೇಡ, ನೀವು ಉಡುಪಿಗೆ ಬಂದು ಬಿಜೆಪಿ ನಾಯಕರ ಕಾಲಿಗೆ ಬಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆತಗ್ಗಿಸುವ ಪರಿಸ್ಥಿತಿ ತಂದಿದ್ದೀರಿ, ನಿಮಗೆ ಸಾಧ್ಯ ಆದರೆ ನಿಮ್ಮ ಮೀನುಗಾರಿಕೆ ಇಲಾಖೆಯಲ್ಲಿ ಆಗಿರುವ ಅಕ್ರಮವನ್ನು ತನಿಖೆಗೆ ಕ್ರಮ ಕೈಗೊಳ್ಳಿ ನಾನು ನಾಳೆಯೇ ನಿಮ್ಮ ಕೈಗೆ ದಾಖಲೆ ಕೊಡುತ್ತೇನೆ, ಅದನ್ನು ತನಿಖೆ ಮಾಡಿಸಿ ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ನ್ಯಾಯ ಕೊಡಿಸಿ ಎಂದು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.