ಕರ್ನಾಟಕ-ತಮಿಳುನಾಡು ನಡುವೆ ಸ್ವಾತಂತ್ರ್ಯಪೂರ್ವದಿಂದಲೂ ಕಾವೇರಿ ನೀರಿನ ಸಮಸ್ಯೆ ಬಿಕ್ಕಟ್ಟಾಗಿಯೇ ಉಳಿದಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜ ಸಾಗರ ಜಲಾಶಯ (ಕೆಆರ್‌ಎಸ್) ನೀರು ಹಂಚಿಕೆ ವಿಚಾರಕ್ಕೆ ಮಾತ್ರವಲ್ಲದೆ, ಮೈನಿಂಗ್ ಮಾಫಿಯಾದಿಂದಲೂ ಕಳೆದ 20 ವರ್ಷಗಳಿಂದ ಸುದ್ದಿಯಲ್ಲಿದೆ. ಇದೀಗ, ಕೆಆರ್‌ಎಸ್‌ನಿಂದ 10.5 ಕಿ.ಮೀ ದೂರದಲ್ಲಿರುವ ಬೇಬಿ ಬೆಟ್ಟದ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟಿಂಗ್‌ಗಾಗಿ ಕುಳಿ (ಡ್ರಿಲ್ಲಿಂಗ್) ಕೊರೆಯುವ ಕೆಲಸವನ್ನು ಅಧಿಕಾರಿಗಳು ಆರಂಭಿಸಿದ್ದು, ಮತ್ತೆ ಮುನ್ನೆಲೆಗೆ ಬಂದಿದೆ. ರೈತರ ವಿರೋಧ-ಪ್ರತಿಭಟನೆಗೆ ಕಾರಣವಾಗಿದೆ.
ಅಂದಹಾಗೆ, ಮೈಸೂರು-ಮಂಡ್ಯ ಭಾಗದ ಜನರ ಮನದಲ್ಲಿ ಕೆಆರ್‌ಎಸ್ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಆದರೂ, ಈ ಭಾವನೆ ಕಾವೇರಿ ನದಿ ತೀರದ ಮರಳು – ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲಾಗಿಲ್ಲ ಎಂಬುದು ವಿಷಾದನೀಯ ಸಂಗತಿ. ಕಳೆದೆರಡು ದಶಕಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆಯ ನಡುವೆ, ಕಲ್ಲು ಗಣಿಗಾರಿಕೆಯ ಕಿತಾಪತಿ ಕೆಆರ್‌ಎಸ್ ಬುಡಕ್ಕೇ ಸಂಚಕಾರ ತಂದೊಡ್ಡಿದೆ. ದಕ್ಷಿಣ ಕರ್ನಾಟಕದ ಪ್ರಮುಖ ಜಿಲ್ಲೆಗಳ ಕೃಷಿಗೆ ನೀರುಣಿಸಿ, ರೈತರ ಬದುಕನ್ನು ಹಸನಾಗಿಸುತ್ತಿರುವ ಕೆಆರ್‌ಎಸ್ ಬುಡವನ್ನು ಅಲುಗಾಡಿಸುವ ಕಲ್ಲುಗಣಿಗಾರಿಕೆಯನ್ನು ತಡೆಯಬೇಕೆಂಬ ಹೋರಾಟ 20 ವರ್ಷಗಳಿಂದ ನಡೆಯುತ್ತಲೇ ಇದೆ. ಆದರೂ, ಮೈನಿಂಗ್ ಮಾಫಿಯಾಗೆ ಫುಲ್‌ಸ್ಟಾಪ್ ಬಿದ್ದಿಲ್ಲ.
ಕೆಆರ್‌ಎಸ್ ನಿರ್ಮಾಣವಾಗಿ ಒಂದು ಶತಮಾನವೂ ಕಳೆದಿಲ್ಲ. ಅದಾಗಲೇ ಕೆಆರ್‍ಎಸ್ ಶಿಥಿಲೀಕರಣದ ಸುಳಿಗೆ ಸಿಲುಕುತ್ತಿದೆ. ಜಲಾಶಯ ನಿಂತಿರುವುದೇ ಸುತ್ತ-ಮುತ್ತಲ ಬೆಟ್ಟಗಳ ಆಧಾರದಿಂದ. ಆದರೀಗ, ಅದೇ ಬೆಟ್ಟಗಳ ಸರಣಿಯ ಇನ್ನೊಂದು ಕಡೆ ಗುಡ್ಡ ಕರಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಮೈಸೂರು-ಮಂಡ್ಯ ಜನರಲ್ಲಿ ಜಲಾಶಯವನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
2018ರ ಸೆಪ್ಟೆಂಬರ್ 25ರಂದು ಕೆಆರ್‍ಎಸ್ ಬಳಿಯಿರುವ ಭೂ ಮಾಪನದಲ್ಲಿ ಕಂಪನ ಅಲೆಗಳು ದಾಖಲಾಗಿದ್ದವು. ಆದರೆ, ಅದು ಭೂಕಂಪನ ಆಗಿರಲಿಲ್ಲ. ಬದಲಾಗಿ, ಕೆಆರ್‌ಎಸ್‌ನಿಂದ 10.5 ಕಿ.ಮೀ ದೂರದಲ್ಲಿ ನೂರಾರು ಎಕರೆಯಲ್ಲಿರುವ ಬೇಬಿಬೆಟ್ಟದ ಕಾವಲಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ಸ್ಫೋಟದಿಂದ ಹೊರಟ ಕಂಪನವಾಗಿತ್ತು.
ಗಮನಾರ್ಹ ವಿಚಾರವೆಂದರೆ, ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಮೆಗಾಬ್ಲಾಸ್ಟ್‌ಗೆ ಅನುಮತಿ ಇಲ್ಲ. ಆದರೂ, ಬೇಬಿ ಬೆಟ್ಟದಲ್ಲಿ ಸಿಡಿಸಿದ ಮೆಗಾಬ್ಲಾಸ್ಟ್‌ನಿಂದಾಗಿ ಆ ಕಂಪನ ಉಂಟಾಗಿತ್ತೆಂದು ಆರೋಪಿಸಲಾಗಿತ್ತು. ಆಗ ಯಾವುದೇ ಅಪಾಯವಾಗಿರಲಿಲ್ಲ. ಅಪಾಯವಿಲ್ಲ ಎಂಬುದನ್ನೇ ಮುಂದೆ ಮಾಡಿಕೊಂಡ ಗಣಿ ಮಾಲೀಕರು, ಕಲ್ಲು ಗಣಿಕಾರಿಕೆ ಮುಂದುವರೆಸಿದ್ದರು. ಆದರೆ, ಅಂದಿನಿಂದ ಈವರೆಗೆ ಮೆಗಾಬ್ಲಾಸ್ಟ್ ನಡೆದಿಲ್ಲ. ಇದೀಗ, ಅಧಿಕಾರಿಗಳೇ ಮೆಗಾಬ್ಲಾಸ್ಟ್‌ಗೆ ಕುಮ್ಮಕ್ಕು ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಇಲ್ಲಿ, ಬೆರಳೆಣಿಕೆಯಷ್ಟು ಮಂದಿ ಗಣಿಗಾರಿಕೆಗೆ ಲೈಸೆನ್ಸ್ ಪಡೆದಿದ್ದರೂ, ಬರೋಬ್ಬರಿ 170ಕ್ಕೂ ಹೆಚ್ಚು ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಬೇಬಿಬೆಟ್ಟವೊಂದರಲ್ಲೇ 44 ಜೆಲ್ಲಿ ಕ್ರಶರ್‌ಗಳು ನಿಂತಿವೆ. ಇವಾವೂ ಹೊಟ್ಟೆಪಾಡಿಗಾಗಿ ನಡೆಯುತ್ತಿರುವ ಗಣಿಗಾರಿಕೆಗಳಲ್ಲ. ಕೆಲವು ವ್ಯಕ್ತಿಗಳ ಸಂಪತ್ತಿನ ಕೇಂದ್ರೀಕರಣದ ದುರಾಸೆಯಿಂದ ಮಾಡಲಾಗುತ್ತಿರುವ ಪ್ರಕೃತಿ ಸಂಪತ್ತಿನ ಲೂಟಿ.
ಕಳೆದ 20 ವರ್ಷಗಳಿಂದ ನಡೆಯುತ್ತಿರುವ ಈ ಲೂಟಿಯಿಂದಾಗಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಿದ್ದ ಪ್ರಾಣಿಸಂಕುಲ ಕ್ಷೀಣಿಸತೊಡಗಿದೆ. ಪಕ್ಷಿಗಳ ತವರು ಮನೆಯಂತಿದ್ದ ಬೆಟ್ಟಗುಡ್ಡ ಪ್ರದೇಶದಲ್ಲಿ ಅಂತರ್ಜಲವು ನೂರಾರು ಅಡಿಗಳ ಆಳಕ್ಕೆ ಇಳಿದುಹೋಗಿದೆ. ಪ್ರಾಣಿ-ಪಕ್ಷಿಗಳು ನೆಲೆಯಿಲ್ಲದೆ, ಈ ಪ್ರದೇಶವನ್ನೇ ಬಿಟ್ಟುಹೋಗಿವೆ. ಅದಷ್ಟೇ ಅಲ್ಲದೆ ಕೃಷಿಯನ್ನು ನಂಬಿದ್ದ ಜನಕ್ಕೆ ಪ್ರತಿನಿತ್ಯ ಧೂಳಿನ ಗಾಳಿಯನ್ನೇ ಉಸಿರಾಡಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಸಾವಿರಾರು ಜನ ಕೃಷಿ ತೊರೆದು ನಗರಗಳತ್ತ ವಲಸೆ ಕೂಡ ಹೋಗಿದ್ದಾರೆ.
ಹೀಗಾಗಿಯೇ ರೈತ ಹೋರಾಟಗಾರ ಮತ್ತು ಮಾಜಿ ಶಾಸಕ ದಿ. ಪುಟ್ಟಣ್ಣಯ್ಯನವರು ರೈತ ಸಂಘಟನೆಗಳೊಂದಿಗೆ ‘ಕೆಆರ್‌ಎಸ್ ಉಳಿಸಿ-ಅಕ್ರಮ ಗಣಿಗಾರಿಕೆ ನಿಲ್ಲಿಸಿ’ ಎಂದು ಹೋರಾಟ ಆರಂಭಿಸಿದ್ದರು. ಆ ಹೋರಾಟಗಳು ಈಗಲೂ ಮುಂದುವರೆದಿವೆ. ಅಕ್ರಮ ಗಣಿಗಾರಿಕೆ ಮಾತ್ರವಲ್ಲ ಸಕ್ರಮ ಗಣಿಗಾರಿಕೆಯನ್ನೂ ನಿಲ್ಲಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಇಂತಹ ಮೈನಿಂಗ್ ಮಾಫಿಯಾ, ದರೋಡೆ, ಲೂಟಿಗಳಂತಹ ಕಾರಣಗಳಿಂದಾಗಿ ಈಗಾಗಲೇ ದೇಶದ 36 ಜಲಾಶಯಗಳು ಶಿಥಿಲಗೊಂಡಿವೆ. ಹಾಗಾಗಿ, 91 ವರ್ಷ ಹಳೆಯದಾದ ಕೆಆರ್‍ಎಸ್ ಕೂಡ ಈ ಪಟ್ಟಿಗೆ ಸೇರುವ ದಿನಗಳು ದೂರವಿಲ್ಲ. ಕೆಆರ್‍ಎಸ್ ಉಳಿವಿಗಾಗಿ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ನಡೆಸಲು ಬಿಡಬಾರದು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಇದ್ದಾರೆ.
ದುರದೃಷ್ಟಕರ ಸಂಗತಿ ಎಂದರೆ, ಮಾಜಿ ಸಚಿವ, ಮೇಲುಕೋಟೆ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್ ಪುಟ್ಟರಾಜು ಅವರೇ ಗಣಿಗಾರಿಕೆಯನ್ನು ಸಮರ್ಥಿಸಿ, ಗಣಿಗಾರಿಕೆಯನ್ನು ನಿಲ್ಲಿಸುವುದನ್ನು ತಡೆಯಲು ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲೂ ಅವರ ಅಣ್ಣನ ಮಗ ಅಶೋಕ್ ಹೆಸರಿನಲ್ಲಿ ಮೈನಿಂಗ್ ಲೈಸೆನ್ಸ್ ಪಡೆದು ಗಣಿಗಾರಿಕೆಯನ್ನೂ ನಡೆಸುತ್ತಿದ್ದಾರೆ. ಕೆಆರ್‌ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಸಕ್ರಮ ಗಣಿಗಾರಿಕೆಗಳಲ್ಲಿ ಅತ್ಯುತ್ತಮ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡಿರುವ ಕ್ರಶರ್‌ಗಳು ಪುಟ್ಟರಾಜುನ ಅಣ್ಣನ ಮಗನದ್ದೇ ಆಗಿವೆ ಎಂದೂ ರೈತ ಹೋರಾಟಗಾರರು ಹೇಳುತ್ತಿದ್ದಾರೆ. ಮಣ್ಣಿನ ಮಕ್ಕಳ ಪಕ್ಷದಲ್ಲಿರುವ ಪುಟ್ಟರಾಜು, ಅದೇ ಮಣ್ಣು-ಕಲ್ಲನ್ನು ಅಗೆದು ಮಾರಾಟ ಮಾಡುತ್ತಿದ್ದಾರೆ.

ಕೆಆರ್‌ಎಸ್‌ಗೆ ಗಂಡಾಂತರವಾಗಿರುವ ಮೈನಿಂಗ್ ಮಾಫಿಯಾಕ್ಕೆ ಫುಲ್‍ಸ್ಟಾಪ್ ಹಾಕುವಂತಹ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಗಣಿ ಭೂವಿಜ್ಞಾನ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮವು ಗಣಿಗಾರಿಕೆಯನ್ನೇ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿವೆ. ಕೆಆರ್‌ಎಸ್ ವ್ಯಾಪ್ತಿಯಲ್ಲಿ ಮೆಗಾಬ್ಲಾಸ್ಟ್‌ಅನ್ನು ಹೈಕೋರ್ಟ್ ನಿಷೇಧಿಸಿದೆ. ಮಾತ್ರವಲ್ಲದೆ, ಟ್ರಯಲ್ ಬ್ಲಾಸ್ಟ್ ಕೂಡ ನಡೆಸದಂತೆ ಸೂಚನೆ ನೀಡಿದೆ. ಆದರೂ, ಬುಧವಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್‌ಗಾಗಿ ಡ್ರಿಲ್ಲಿಂಗ್ ಮಾಡಿದ್ದಾರೆ. ಅಧಿಕಾರಿಗಳ ಕ್ರಮವನ್ನು ರೈತರು ಖಂಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರ ಮೂಲಕ ತಡೆದಿದ್ದಾರೆ.
”ಹೈಕೋರ್ಟ್ ಆದೇಶದಂತೆ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಸರಾಸರಿ 60 ಅಡಿ ಆಳದಲ್ಲಿ 5 ಕಡೆ ಕುಳಿ ಕೊರೆಯುತ್ತಿದ್ದೇವೆ. ಬಳಿಕ, ಪುಣೆ ಮತ್ತು ಜಾರ್ಖಂಡ್ ಮೂಲಕ ಗಣಿ ತಜ್ಞರು ‘ಪರೀಕ್ಷಾರ್ಥ ಸ್ಫೋಟ’ ನಡೆಸಲಿದ್ದಾರೆ” ಎಂದು ಹಿರಿಯ ಭೂವಿಜ್ಞಾನಿ ರೇಷ್ಮಾ ತಿಳಿಸಿದ್ದಾರೆ.

ಕುಳಿ ಕೊರೆಯುವುದನ್ನು ಖಂಡಿಸಿ, ಪ್ರತಿಭಟನೆ ನಡೆಸಿರುವ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ”ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂದು ಗೊತ್ತಿದ್ದರೂ ಜಿಲ್ಲಾಡಳಿತ ‘ಟ್ರಯಲ್ ಬ್ಲಾಸ್ಟ್’ಗೆ ಮುಂದಾಗಿದೆ. ಇದರಲ್ಲಿ ಪ್ರಭಾವಿಗಳ ಕೈವಾಡ ಮತ್ತು ಕಲ್ಲು ಗಣಿಗಾರಿಕೆ ನಡೆಸುವ ಹುನ್ನಾರವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ, ಟ್ರಯಲ್ ಬ್ಲಾಸ್ಟ್ ನಡೆಸಿ, ಪ್ರಭಾವಿಗಳ ಒತ್ತಡಕ್ಕೆ ಮಣಿದು ಗಣಿಗಾರಿಕೆಗೆ ಯಾವುದೇ ತೊಂದರೆ ಇಲ್ಲವೆಂದು ಇಲಾಖೆ ಕ್ಲೀನ್‌ಚಿಟ್ ಕೊಟ್ಟುಬಿಟ್ಟರೆ, ಕೆಆರ್‌ಎಸ್ ಸುತ್ತಲಿನ ಬೆಟ್ಟ-ಗುಡ್ಡಗಳ ಪ್ರದೇಶ ಬರಿದಾಗಲಿದೆ, ಶತಮಾನದ ಅಂಚಿನಲ್ಲಿರುವ ಕೆಆರ್‌ಎಸ್‌ಗೂ ಸಂಚಕಾರ ಎದುರಾಗಲಿದೆ. ಹೀಗಾಗಿ, ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಡ್ರಿಲ್ಲಿಂಗ್, ಟ್ರಯಲ್ ಬ್ಲಾಸ್ಟ್‌ಗಳನ್ನು ತಡೆಯಬೇಕು. ಅಣೆಕಟ್ಟೆಯ ಸುತ್ತಲಿನ 20 ಕಿ.ಮೀ ವ್ಯಾಪ್ತಿಯ ಗಣಿಗಾರಿಕೆಗೆ ಇತಿಶ್ರೀ ಹಾಕಬೇಕು.