ಶಾಲಾ, ಕಾಲೇಜು ಹಾಸ್ಟೆಲುಗಳಿಗೆ ನೀರನ್ನು ಒದಗಿಸುವ ಹೊಣೆ ಸ್ಥಳೀಯ ಪಂಚಾಯಿತಿ, ಸರ್ಕಾರದ್ದು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಸರಿಪಡಿಸಬೇಕು ಎಂದು ಕೆಆರ್‌ಎಸ್ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ ಆಗ್ರಹಿಸಿದರು.
ಅವರು ಮದ್ದೂರು ತಾಲೂಕಿನ ಕೆ ಎಂ ದೊಡ್ಡಿಯಲ್ಲಿ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಾಸ್ಟೆಲ್ ಬಾಲಕಿಯರಿಗೆ ಆಗುತ್ತಿರುವ ನೀರಿನ, ಊಟದ ಸಮಸ್ಯೆ ತಿಳಿದು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ನಮ್ಮ ಗೆಳೆಯರ ಮಕ್ಕಳು ಓದುತ್ತಿದ್ದಾರೆ. ಇಲ್ಲಿ ಸರಿಯಾದ ಊಟದ, ನೀರಿನ ವ್ಯವಸ್ಥೆ ಇರುವುದಿಲ್ಲ. ಮೊದಲು ಸ್ಥಳೀಯ ಪಂಚಾಯಿತಿ ಹಾಗೂ ಹಿಂದುಳಿದ ವರ್ಗ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ವಾರ್ಡನ್ ಚಂದ್ರಕಲಾ ಮಾತನಾಡಿ, ಇಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ಇದೆ. ಕಳೆದ ಒಂದು ತಿಂಗಳಿನಿಂದ ಕೊಳವೆ ಬಾವಿ ಕೆಟ್ಟ ಕಾರಣ ನೀರಿಗೆ ತೊಡಕಾಗಿದೆ. 5 ಸಾವಿರ ನೀರಿನ ಟ್ಯಾಂಕಿನ ವ್ಯವಸ್ಥೆ ಇದೆ. ಪಂಚಾಯಿತಿಗೆ 20 ದಿನಗಳ ಹಿಂದೆ ನೀರಿನ ತೊಂದರೆಯ ಬಗ್ಗೆ ಪತ್ರ ಕೊಟ್ಟಿದ್ದೇವೆ. ಅವರು ಸರಿಪಡಿಸುವ ಭರವಸೆ ನೀಡಿದ್ದಾರೆ. ಕಟ್ಟಡದ ಮಾಲೀಕರು ಹೊಸ ಕೊಳವೆಬಾವಿ ಹಾಕಿಸಲು 15 ದಿನಗಳ ಕಾಲಾವಕಾಶ ಕೋರಿದ್ದಾರೆ. ಶೀಘ್ರ ನೀರಿನ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದರು.
ಪ್ರತಿಭಟನೆಯ ವಿಚಾರ ತಿಳಿದು ಸ್ಥಳೀಯ ಪಂಚಾಯಿತಿಯ ಪಿಡಿಒ ಸುಧಾ ಹಾಗೂ ಅದೇ ವಾರ್ಡಿನ ಪಂಚಾಯತಿ ಸದಸ್ಯರು ಆಗಮಿಸಿ, ನಮಗೆ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇರಲಿಲ್ಲ. ಈಗ ತಿಳಿದು ಬಂದಿರುತ್ತದೆ. ಇನ್ನೆರಡು ದಿನಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮುಂಚಿತವಾಗಿಯೇ ಸಮಸ್ಯೆ ಹೇಳಿದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲೇಶ್, ಪ್ರಮೋದ್ ಮದ್ದೂರು ತಾಲ್ಲೂಕು ಅಧ್ಯಕ್ಷರು, ಮಹದೇವು ಕೂಳಗೆರೆ ಮಳವಳ್ಳಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ವಿಷಕಂಠಯ್ಯ, ರವೀಂದ್ರ ಕೊತ್ತತ್ತಿ, ವೆಂಕಟೇಶ್ ಕನಕಪುರ, ನಾಗರಾಜು ಸಾಸಲಾಪುರ, ಪುಟ್ಟಮಾಯಿಗ, ಮಾದೇಗೌಡ ಮಳವಳ್ಳಿ ಹಾಗೂ ಇನ್ನಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
