ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನಿಂದ ಬೆಂಗಳೂರು ಮಹಾ ನಗರದ ವಿವಿಧ ಸ್ಥಳಗಳಿಗೆ ತಲುಪುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಯುವಜ್ರ ಹಾಗೂ ವಿವಿಧ ನಗರಗಳಿಗೆ ತಲುಪುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ‘ಫ್ಲೈಬಸ್’ ಸೇವೆಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಪ್ರಸ್ತುತ ವಿಮಾನ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಒಟ್ಟು 13 ಫ್ಲೈಬಸ್‍ಸೇವೆಗಳನ್ನು 42 ಟ್ರಿಪ್‍ಗಳ ಮುಖಾಂತರ ಪ್ರತಿನಿತ್ಯ ಮೈಸೂರು, ಕುಂದಾಪುರ ಹಾಗೂ ಮಡಿಕೇರಿ ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರ ಸೌಲಭ್ಯಕ್ಕಾಗಿ ಪ್ರತಿಷ್ಠಿತ ‘ಫ್ಲೈ ಬಸ್’ ಸಾರಿಗೆ ಸೇವೆಯನ್ನು 2013ರ ಆಗಸ್ಟ್ 13ರಿಂದ ಪ್ರಾರಂಭಿಸಲಾಗಿತ್ತು. ಈ ಸೇವೆಗೆ ಹತ್ತು ವರ್ಷಗಳು ಪೂರ್ಣಗೊಂಡಿದ್ದು, ಈಗ ದಶಕದ ವರ್ಷದಲ್ಲಿ ಹೊಸ ಟರ್ಮಿನಲ್‌ನಿಂದಲೂ ಕೂಡ ಫ್ಲೈ ಬಸ್ ಸೇವೆಗೆ ಚಾಲನೆ ನೀಡಲಾಗಿದೆ.
ಫ್ಲೈಬಸ್ ಸಾರಿಗೆಗಳನ್ನು ಹಂತ ಹಂತವಾಗಿ ಪ್ರಾರಂಭಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ 9, ಮಡಿಕೇರಿಗೆ 2 ಹಾಗೂ ಕುಂದಾಪುರಕ್ಕೆ 2 ಫ್ಲೈಬಸ್ ಸಾರಿಗೆಯನ್ನು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಪ್ರತಿ ದಿನ 137 ಹವಾನಿಯಂತ್ರಿತ ಬಸ್‍ಗಳ ಮೂಲಕ 944 ಟ್ರಿಪ್ಪುಗಳಲ್ಲಿ ಕಾರ್ಯಾಚರಣೆ ನಡೆಸಿ 47,907 ಕಿ.ಮಿಗಳನ್ನು ಕ್ರಮಿಸಿ 14000 ಪ್ರಯಾಣಿಕರಿಗೆ ಸೇವೆಯನ್ನು ಕಲ್ಪಿಸಲಾಗಿದೆ.
ವಿಮಾನ ನಿಲ್ದಾಣದ ಲಾಂಜ್‍ನಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ಸುಗಳ ಕಾರ್ಯಾಚರಣೆಯ ಸಮಯ, ಡಿಜಿಟಲ್ ಫಲಕಗಳು, ಸಾರ್ವಜನಿಕ ಉದ್ಘೋಷಣೆಯ ವ್ಯವಸ್ಥೆ ಕೂಡ ಕಲ್ಪಿಸಲಾಗಿದ್ದು, 40 ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ಮಾಹಿತಿಯನ್ನು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಒದಗಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಫ್ಲೈಬಸ್’ ಸೇವೆಯ ಚಾಲನೆ ನೀಡುವ ವೇಳೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತ್ಯಕಿ ರಘುನಾಥ್, ಮುಖ್ಯ ಮಾರುಕಟ್ಟೆ ಅಧಿಕಾರಿ ಶಾಲಿನಿ ರಾವ್, ಡೊಮಿನಿಕ್ ದೇವಸಿಯಾ, ವಿಶಾಲ್ ಕೆ, ಸಂಜಯ್ ಚಂದ್ರ, ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.