ಕುಂದಾಪುರ ತಾಲೂಕಿನ ಶೇಡಿಗುಂಡಿ, ವಾಟೆಗುಂಡಿ ಜನತೆಯ ಸಂಪರ್ಕ ಕೊಂಡಿಯಾಗಿದ್ದ ಬೆಳ್ಕಲ್ ಶಾಲೆಯ ಮುಂಭಾಗದ ಕಿರು ಸೇತುವೆಯು ಮಳೆಗಾಲದ ನೀರಿನ ರಭಸಕ್ಕೆ ಕುಸಿದುಹೋಗಿದೆ.
ಕಳೆದ ಎರಡು ಮೂರು ದಿನಗಳಿಂದ ವಿಪರೀತವಾಗಿ ಮಳೆ ಬಂದಿರುವುದರಿಂದ ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದು ಬಂದ ನೀರಿನ ರಭಸಕ್ಕೆ ಸೇತುವೆಯ ಪಿಲ್ಲರ್‌ಗಳ ಅಡಿಪಾಯ ಕೊಚ್ಚಿ ಹೋಗಿರುವುದರಿಂದ ಪಿಲ್ಲರ್‌ಗಳು ವಾಲಿಕೊಂಡಿದ್ದು, ಸೇತುವೆಯ ಮೇಲ್ಬಾಗದಲ್ಲಿ ಅನೇಕ ಕಡೆ ಬಿರುಕು ಬಿಟ್ಟಿದೆ. ಇದರಿಂದಾಗಿ ಕುಸಿದು ಬೀಳುವ ಹಂತದಲ್ಲಿದೆ.
ಶಾಲೆಯ ಮುಂಭಾಗದಲ್ಲಿಯೇ ಹೊಳೆ ಹರಿದು ಹೋಗುವುದರಿಂದ ಹೊಳೆಯ ಬದಿಯು ಬಿರುಕು ಬಿಟ್ಟಿದ್ದು ಮುಂದೆ ಶಾಲೆಗೂ ಕೂಡ ಅಪಾಯ ಎದುರಾಗುವ ಸಾಧ್ಯತೆಯು ಹೆಚ್ಚಾಗಿರುವುದು ಕಂಡುಬರುತ್ತಿದೆ. ಜಡ್ಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸತೀಶ್ ತೋಳಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಶ್ರೀನಿವಾಸ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಹೊಳೆ ಬದಿಯ ಐವತ್ತು ಮೀಟರ್ ಅಂತರದಲ್ಲೇ ಶಾಲೆ ಇರುವುದರಿಂದ ಅಪಾಯಕ್ಕೆ ಮುನ್ಸೂಚನೆ ಯಂತಿರುವ ಸೇತುವೆಯ ಕುಸಿತದಿಂದ ಶಾಲಾ ಮಕ್ಕಳ ಪೋಷಕರಲ್ಲಿ ಭಯದ ವಾತಾವರಣ ಉಂಟಾಗಿದೆ.
ಬೆಳ್ಕಲ್ ಶಾಲೆಗೆ, ಅಂಗನವಾಡಿಗೆ ಹೋಗುವ ಮಕ್ಕಳಿಗೆ ದಿನನಿತ್ಯ ಓಡಾಡುವ ಸ್ಥಳೀಯ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಆಗ್ರಹಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, “ದಶಕಗಳ ಹಿಂದೆ ಶೇಡಿಗುಂಡಿಯ ಭಾಗದ ಜನರಿಗೆ ಸಂಪರ್ಕ ಬೆಸೆಯುವ ಏಕೈಕ ಮಾರ್ಗ ಇದಾಗಿತ್ತು. ಅಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ನಿರ್ಮಾಣಗೊಂಡ ಈ ಸೇತುವೆ ಈ ಭಾಗದ ಜನರ ಸಂಪರ್ಕ ಕೊಂಡಿಯಾಗಿತ್ತು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ಜಿಲ್ಲೆಯಲ್ಲಿ ಶತಕದತ್ತ ಡೆಂಘೀ; ನಿಯಂತ್ರಿಸುವಲ್ಲಿ ಇಲಾಖೆಗಳು ವಿಫಲ
ಜಿಲ್ಲಾಡಳಿತವು ಅತೀ ಶೀಘ್ರವಾಗಿ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರೂ ಆಗಿರುವ ವಾಸುದೇವ ಮುದೂರು ಆಗ್ರಹಿಸಿದ್ದಾರೆ.