ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ವೇಗವಾಗಿ ಬಂದ ಮೀನು ಸಾಗಾಟದ ರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಮಂದಿ ಹಾಗೂ ಲಾರಿಯ ಚಾಲಕ ಸೇರಿ ಒಟ್ಟು ಎಂಟು ಮಂದಿ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ನಡೆದಿದೆ.
ಘಟನೆಯು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಭಾಶಿ ಸಮೀಪದ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರುಗಡೆ ನಡೆದಿದೆ. ಘಟನೆಯ ಭೀಕರ ದೃಶ್ಯವು ಹೊಟೇಲೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಗಂಭೀರ ಗಾಯಗೊಂಡಿರುವ ಎಂಟು ಮಂದಿಯನ್ನು ಕೂಡ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ವೇಗವಾಗಿ ಬಂದ ಮೀನಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಏಳು ಮಂದಿ ಹಾಗೂ ಲಾರಿಯ ಚಾಲಕ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ನಡೆದಿದೆ. ಘಟನೆಯ ಭೀಕರ ದೃಶ್ಯವು ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. pic.twitter.com/srptmGvqAi
— eedina.com ಈ ದಿನ.ಕಾಮ್ (@eedinanews) November 20, 2024
ಕೇರಳ ಮೂಲದ ಇನ್ನೋವಾ ಕಾರಿನಲ್ಲಿ ಏಳು ಜನ ಪ್ರವಾಸಕ್ಕೆಂದು ಬಂದಿದ್ದರೆನ್ನಲಾಗಿದ್ದು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಕುಂಭಾಶಿಯ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರಗೋಪುರದ ಬಳಿ ಪಾಸ್ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಹೋಗಲೆಂದು ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ಗ್ರಾಮ ಪಂಚಾಯತ್ ಚುನಾವಣೆ: ಮೀಸಲಾತಿ ಪ್ರಕಟ; ನಾಮಪತ್ರ ಸಲ್ಲಿಕೆಗೆ ನ. 27 ಕೊನೆಯ ದಿನ
ಇದೇ ಸಂದರ್ಭ ಗೋವಾ ಕಡೆಯಿಂದ ಮೀನು ತುಂಬಿಸಿಕೊಂಡು ಕೇರಳ ಕಡೆಗೆ ಪ್ರಯಾಣಿಸುತ್ತಿದ್ದ ಮಂಗಳೂರು ನೋಂದಣಿ ಸಂಖ್ಯೆಯ ಹೊನ್ನಾವರ ಮೂಲದ ಇನ್ಸುಲೇಟರ್ ವಾಹನ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇನ್ನೋವಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇನ್ಸುಲೇಟರ್ ವಾಹನ ಪಲ್ಟಿಯಾಗಿ ಬಿದ್ದಿದೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಸಾದ್ ಕುಮಾರ್ ಕೆ, “ಇನ್ನೋವಾ ಕಾರಿನಲ್ಲಿದ್ದವರೆಲ್ಲರೂ ಕೇರಳ ಮೂಲದವರು. ಕೊಲ್ಲೂರು ದೇವಸ್ಥಾನ ನೋಡಿಕೊಂಡು ಬರುವಾಗ ರಸ್ತೆಯಲ್ಲಿ ಈ ಸಂದರ್ಭ ಕುಂಭಾಶಿಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ದ್ವಾರಗೋಪುರದ ಬಳಿ ಪಾಸ್ ಆಗುತ್ತಿದ್ದಂತೆ ದೇವಸ್ಥಾನಕ್ಕೆ ಹೋಗಲೆಂದು ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಮೀನಿನ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯ ವೇಳೆ ಇನ್ನೋವಾ ಕಾರಿನಲ್ಲಿ ಚಾಲಕ ಸೇರಿ 4 ಮಂದಿ ಪುರುಷರು, ಮೂವರು ಮಹಿಳೆಯರಿದ್ದರು. ಇನ್ನೋವಾ ಕಾರಿನಲ್ಲಿದ್ದವರೆಲ್ಲರೂ ದಂಪತಿಗಳು. ಅವರ ವಿವರಗಳನ್ನು ಕಲೆ ಹಾಕಿ, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದೇವೆ. ಅವರು ಈಗಾಗಲೇ ಊರಿನಿಂದ ಹೊರಟಿದ್ದಾರೆ. ಮೀನಿನ ಲಾರಿಯ ಚಾಲಕ ಮಹೇಶ್ ಎಂಬುವವರಿಗೂ ಗಾಯಗಳಾಗಿದೆ” ಎಂದು ತಿಳಿಸಿದ್ದಾರೆ.

“ಎಂಟು ಮಂದಿಯ ಪೈಕಿ ನಾಲ್ಕು ಜನ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮೀನಿನ ಲಾರಿಯ ಚಾಲಕ ಮಹೇಶ್ ಸೇರಿ ನಾಲ್ಕು ಜನ ಕುಂದಾಪುರದ ಎನ್ ಅರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸಂಬಂಧ ಈಗಾಗಲೇ ಎಫ್‌ಆಐರ್ ದಾಖಲಿಸಿಕೊಂಡಿದ್ದೇವೆ” ಎಂದು ಸಬ್ ಇನ್ಸ್‌ಪೆಕ್ಟರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.


