ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು, ನಕಲಿ ಚಿನ್ನ ನೀಡಿ, ಅಸಲಿ ಚಿನ್ನದೊಂದಿಗೆ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ನಗರದಲ್ಲಿ ನಡೆದಿದೆ.
ಕುಂದಾಪುರದ ಅಪೂರ್ವ ಜ್ಯುವೆಲ್ಲರ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಚಿನ್ನದಂಗಡಿ ಮಾಲೀಕ ಈಗ ಪೊಲೀಸರ ಮೊರೆ ಹೋಗಿದ್ದಾನೆ.
ಗ್ರಾಹಕರಂತೆ ಬಂದಿದ್ದ ಮಹಿಳೆಯರಿಬ್ಬರು ಹಳೆಯ ಚಿನ್ನ ಇದೆ ಎಂದಿದ್ದರು. ಹಳೆಯ ಚಿನ್ನ ಕೊಟ್ಟು, ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿದ್ದರು. ಆ ಬಳಿಕ ನಕಲಿ ಚಿನ್ನವನ್ನು ತೋರಿಸಿದ್ದರು. ಅಂಗಡಿ ಮಾಲೀಕರು ಮಹಿಳೆಯರು ಕೊಟ್ಟ ನಕಲಿ ಚಿನ್ನ ಪಡೆದು, ಅವರಿಗೆ ಹೊಸ ಅಸಲಿ ಚಿನ್ನ ಕೊಟ್ಟು ಕಳುಹಿಸಿದ್ದಾರೆ.
ಚಿನ್ನ ಪಡೆದ ಅಂಗಡಿ ಮಾಲೀಕ, ಪರಿಶೀಲಿಸಿದಾಗ, ಬರೀ ತಾಮ್ರ ಎನ್ನುವುದು ತಿಳಿದು ಬಂದಿದೆ. ಸುಮಾರು ಎರಡೂವರೆ ಲಕ್ಷ ರೂ. ಮೋಸ ಮಾಡಿ ಚಾಲಾಕಿ ಮಹಿಳೆಯರು ಪರಾರಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಗುಬ್ಬಿ | ಶಾಲೆ ಮುಂದೆ ಜಿಲೆಟಿನ್ ಕಡ್ಡಿ ಸ್ಫೋಟ: ವಿದ್ಯಾರ್ಥಿಯ ಕೈಗೆ ಗಂಭೀರ ಗಾಯ
ಗ್ರಾಹಕರ ಸೋಗಿನಲ್ಲಿ ಬಂದಿದ್ದ ಮಹಿಳೆಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಬ್ಬರನ್ನು ಪತ್ತೆಹಚ್ಚುವಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

