ಪತ್ನಿಯ ರೀಲ್ಸ್ ನೋಡುವ ಹವ್ಯಾಸದ ಕಾರಣಕ್ಕೆ ದಂಪತಿಯ ನಡುವೆ ಜಗಳ ಉಂಟಾಗಿ ಪತ್ನಿಯನ್ನು ಪತಿ ಹೊಡೆದು ಕೊಂದ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಿಲಿಯಾಣ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರೇಖಾ ಪೂಜಾರಿ(26) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಂದ ಆರೋಪಿಯನ್ನು ದರ್ಕಾಸು ನಿವಾಸಿ ಗಣೇಶ್ ಪೂಜಾರಿ (43) ಎಂದು ಗುರುತಿಸಲಾಗಿದೆ. ಕೊಲೆಗೀಡಾದ ರೇಖಾ ಅವರು ಶಂಕರನಾರಾಯಣದಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ಸಿಬ್ಬಂದಿಯಾಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ.
ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಗಣೇಶ್ ಪೂಜಾರಿ, ಗುರುವಾರ ತಡರಾತ್ರಿ ಮನೆಗೆ ಬಂದು ಕ್ಷುಲ್ಲಕ ಕಾರಣಕ್ಕೆ ಹೆಂಡತಿಯೊಂದಿಗೆ ಜಗಳಕ್ಕೆ ನಿಂತಿದ್ದ. ಬಳಿಕ ಮಾತಿಗೆ ಮಾತು ಬೆಳೆದು ಉದ್ರೇಕಗೊಂಡ ಪತಿ ಗಣೇಶ್ ಪೂಜಾರಿ ಪತ್ನಿಯ ಕುತ್ತಿಗೆಗೆ ಕತ್ತಿಯಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರೇಖಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಪತ್ನಿ ಸತ್ತಿದ್ದಾಳೆ ಎನ್ನುವುದು ತಿಳಿಯುತ್ತಿದ್ದಂತೆ ಆರೋಪಿ ಗಣೇಶ್ ಪೂಜಾರಿ ಮನೆಯಿಂದ ಓಡಿ ಹೋಗಿದ್ದ. ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸಿದ್ದ ಶಂಕರನಾರಾಯಣ ಪೊಲೀಸರು, ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಬಂಟ್ವಾಳ | ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ: ‘ಬೋಳಂಗಡಿ’ಯಲ್ಲಿ ಬಸ್ ನಿಲ್ಲಿಸಲು ಆದೇಶ
ಗಣೇಶ್ ಪೂಜಾರಿ-ರೇಖಾ ದಂಪತಿಗಳಿಗೆ 6 ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳಿದ್ದು, ಇದೀಗ ಆ ಮಕ್ಕಳು ಅನಾಥರಾಗಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಹಿರಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.