- ’11 ವರ್ಷದಿಂದ ನಮ್ಮ ಸಂಸದರು ಧ್ವನಿ ಎತ್ತಿರಲಿಲ್ಲ’ ಎಂದು ಆರೋಪಿಸಿದ ಸೌಜನ್ಯ ತಾಯಿ
- ಡಾ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಕೆಳಗಿಳಿಸಿ: ಕುಸುಮಾವತಿ ಆಗ್ರಹ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಪ್ರಕರಣವನ್ನು ಮರು ತನಿಖೆ ನಡೆಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಈ ನಡುವೆ ಬಿಜೆಪಿ ಕೂಡ ಸೌಜನ್ಯ ಪರ ಹೋರಾಟಕ್ಕೆ ಧುಮುಕಿದ್ದು, ಹೀಗಾಗಿ ಇಂದು ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಸಂಸದ, ಶಾಸಕರು ಹಾಗೂ ಉಡುಪಿಯ ಬಿಜೆಪಿ ಶಾಸಕರು ಪ್ರತಿಭಟನೆಯಲ್ಲಿದ್ದರು.
ಬೆಳ್ತಂಗಡಿಯ ಮಿನಿ ವಿಧಾನಸೌಧದ ಬಳಿ ನಡೆದ ಪ್ರತಿಭಟನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಭಾಗವಹಿಸಿ, ಮಾತನಾಡಿದ್ದು, ಪ್ರಧಾನಿ ಬಳಿಗೆ ಕರೆದೊಯ್ಯುವಂತೆ ಬೇಡಿಕೆ ಇಟ್ಟಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಕುಸುಮಾವತಿ, “ಡಾ.ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಕೆಳಗಿಳಿಸಬೇಕು.ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಮ್ಮನ್ನು ಕರೆದುಕೊಂಡು ಹೋಗುತ್ತೀರಾ? ನನಗೆ ಮಾತು ಕೊಡಿ” ಎಂದು ಬಿಜೆಪಿ ಮುಖಂಡರ ಬಳಿ ನೇರವಾಗಿ, ಧೈರ್ಯದಿಂದಲೇ ಕೇಳಿದರು. ಅದಕ್ಕೆ ವೇದಿಕೆಯಲ್ಲಿದ್ದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಇತರರು ತಲೆ ಅಲ್ಲಾಡಿಸಿದ್ದಾರೆ.

“ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮನೆಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕೇಳಿದ್ದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. 11 ವರ್ಷದಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದೇನೆ. ಈವರೆಗೆ ನಮ್ಮ ಸಂಸದರು ಧ್ವನಿ ಎತ್ತಿರಲಿಲ್ಲ. 11 ವರ್ಷ ಕಳೆದ ಬಳಿಕ ಮಾತನಾಡಿದ್ದಾರೆ. ಹಾಗಾಗಿ, ಮೋದಿಯವರ ಬಳಿಗೆ ನಮ್ಮನ್ನು ಕರೆದುಕೊಂಡು ಹೋಗಿ’ ಎಂದು ನಳಿನ್ ಕುಮಾರ್ ಹೆಸರೆತ್ತದೆ ಪರೋಕ್ಷವಾಗಿ ಸೌಜನ್ಯ ತಾಯಿ ಕುಸುಮಾವತಿ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಇನ್ನೂ ಕೂಡ ಪ್ರತಿಭಟನೆಗೆ ಆಗಮಿಸಿರಲಿಲ್ಲ.

’17 ವರ್ಷದಿಂದ ಸಾಕಿ ಸಲಹಿದ್ದ ನನ್ನ ಮಗಳನ್ನು ಒಂದು ದಿನದಲ್ಲಿ ನನ್ನ ಮಗಳನ್ನು ಅತ್ಯಾಚಾರಗೈದು, ಕೊಲೆ ಮಾಡಿ ಬಿಸಾಡಿ ಹೋಗಿದ್ದಾರೆ. ಮಲ್ಲಿಕ್ ಜೈನ್, ಉದಯ್ ಜೈನ್, ಧೀರಜ್ ಜೈನ್ ಹಾಗೂ ವೀರೇಂದ್ರ ಹೆಗ್ಗಡೆಯವರ ತಮ್ಮ ಮಗನ ನಿಶ್ಚಲ್ ಜೈನ್ ಈ ಪ್ರಕರಣದಲ್ಲಿ ಇದ್ದಾನೆ ಎಂದು ಈ ಬಹಿರಂಗ ಸಭೆಯಲ್ಲಿ ಹೇಳುತ್ತಿದ್ದೇನೆ. ನನಗೆ ನ್ಯಾಯ ಕೊಡಿ’ ಎಂದು ನೇರವಾಗಿ ಹೆಸರೆತ್ತಿ ಹೇಳಿ, ನ್ಯಾಯ ಕೊಡಿ ಎಂದು ಕೇಳಿದರು.
ಆ ಬಳಿಕ ಬಂದ ಸಂಸದ ನಳಿನ್ ಕುಮಾರ್ ಮಾತನಾಡಿ, ಸೌಜನ್ಯ ಪ್ರಕರಣವನ್ನು ಮರು ತನಿಖೆ ಆಗಬೇಕು ಎಂಬುದು ನಮ್ಮ ಬೇಡಿಕೆ. ಪ್ರಕರಣದ ಹಿಂದೆ ಯಾರೇ ಇದ್ದರೂ ಅವರ ಬಂಧನವಾಗಬೇಕು. ಪ್ರಕರಣ ಸಿಬಿಐ ತನಿಖೆ ನಡೆಸುತ್ತಿರುವಾಗ ಜನಪ್ರತಿನಿಧಿಗಳಾದವರು ಮಾತನಾಡುವ ಹಾಗಿಲ್ಲ. ಮರು ತನಿಖೆ ಆಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರನ್ನು ಶೀಘ್ರವೇ ಭೇಟಿ ಮಾಡಲಿದ್ದೇವೆ. ಸೌಜನ್ಯಳ ಕುಟುಂಬಕ್ಕೆ ನ್ಯಾಯ ಒದಗಿಸಲು ಬಿಜೆಪಿ ಕೊನೆಯವರೆಗೂ ಹೋರಾಟ ನಡೆಸಲಿದೆ’ ಎಂದು ತಿಳಿಸಿದರು.

‘ಸೌಜನ್ಯ ಪ್ರಕರಣದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಬೇಕು. ನಾನು ಅಥವಾ ಶಾಸಕ ಹರೀಶ್ ಪೂಂಜ ಆ ಕೆಲಸ ಮಾಡುತ್ತೇವೆ’ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಡಿಯೋ ಕೃಪೆ: V4 NEWS