ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿದ್ದ ನೂತನ ಪ್ರಯೋಗಾಲಯ ಮತ್ತು ಐಸೋಲೇಷನ್ ವಾರ್ಡ್‌ಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಆಸ್ಪತ್ರೆಯ ಕೆಳ ಮಹಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ರೋಗಿಗಳಿಗೆ ಗೊಂದಲವನ್ನುಂಟು ಮಾಡುತ್ತಿದೆ. ಕೆಳಮಹಿಡಿಯ ಆಧುಣೀಕರಣಕ್ಕಾಗಿ ಶಾಸಕರು ಹೆಚ್ಚಿನ ಅನುದಾನ ಬೇಡಿಕೆಯಿಟ್ಟಿದ್ದು, ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೈದ್ಯರ ಕೊರತೆ ನೀಗಿಸಲಾಗುತ್ತದೆ
ಮುಂದಿನ ತಿಂಗಳಿನಲ್ಲಿ ಕೌನ್ಸಿಲಿಂಗ್ ನಡೆಸಿ, ಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಮೂಲಕ ವೈದ್ಯರ ಕೊರತೆಯನ್ನು ನೀಗಿಸಲಾಗುತ್ತದೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರ ವೇತನ ಕಡಿಮೆಯಿದ್ದು, ವೇತನ ಹೆಚ್ಚಳ ಕುರಿತು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ತಾಲೂಕಿನ ಜಿ.ಮದ್ದೇಪಲ್ಲಿಯಲ್ಲಿ ಸುಮಾರು 5 ಕೋಟಿ ವೆಚ್ಚದ ಆರೋಗ್ಯ ಕೇಂದ್ರ ನಿರ್ಮಾಣ ಕಾಮಾಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದ ಅಪೌಷ್ಟಿಕತೆಯ ಗಂಭೀರತೆ ಕೇಂದ್ರಕ್ಕೆ ಅರಿವಾಗುವುದು ಯಾವಾಗ?
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಡಾ.ಅರ್ಚನ, ಗುಡಿಬಂಡೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ನಾಗರಾಜ ಸೇರಿದಂತೆ ಹಲವಾರು ಗಣ್ಯರು ಇದ್ದರು.