ಯುವ ಜನೋತ್ಸವವನ್ನು ಉದ್ಘಾಟಿಸಲು ನಟ ಚೇತನ್ ಅವರನ್ನು ಆಹ್ವಾನಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ, ಎಬಿವಿಪಿ ಒತ್ತಡಕ್ಕೆ ಮಣಿದಿದ್ದು, ಆಹ್ವಾನವನ್ನು ಹಿಂಪಡೆದಿದ್ದಾರೆ.
ಹುಬ್ಬಳ್ಳಿಯಲ್ಲಿರುವ ನವನಗರದ ಕ್ಯಾಂಪಸ್‌ನಲ್ಲಿ ಜೂನ್ 16 ಮತ್ತು 17ರಂದು ಯುವಜನೋತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಘಾಟಿಸಲು ನಟ ಚೇತನ್ ಅವರನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ ಬಸವರಾಜ ಆಹ್ವಾನಿಸಿದ್ದರು. ಈ ಬಗ್ಗೆ, ಬುಧವಾರ ಸುದ್ದಿಗೋಷ್ಠಿ ನಡೆಸಿ ಕುಲಪತಿ ವಿವರಿಸಿದ್ದರು.
ಈ ಬೆನ್ನಲ್ಲೇ, ಕುಲಪತಿ ಬಸವರಾಜ ಅವರನ್ನು ಭೇಟಿ ಮಾಡಿದ ಎಬಿವಿಪಿ ಮುಖಂಡರು, “ಚೇತನ್ ಅವರನ್ನು ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಬಾರದು. ಉದ್ಘಾಟಕರನ್ನು ಬದಲಿಸದಿದ್ದರೆ, ಕಾರ್ಯಕ್ರಮ ನಡೆಯುವ ಸಮಯದಲ್ಲಿ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದರು.
ಎಬಿವಿಪಿ ಒತ್ತಡಕ್ಕೆ ಮಣಿದ ಕುಲಪತಿಗಳು ಚೇತನ್ ಅವರಿಗೆ ನೀಡಲಾಗಿದ್ದ ಆಹ್ವಾನವನ್ನು ಹಿಂಪಡೆದಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಲು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್ ಪಾಟೀಲ ಅವರನ್ನು ಆಹ್ವಾನಿಸಿದ್ದಾರೆ.