ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣವೊಡ್ಡಿ ಬಡ ವಿದ್ಯಾರ್ಥಿಗಳು ಓದುವ ಹಲವು ಶಾಲೆಗಳಿಗೆ ಸರ್ಕಾರ ಬೀಗ ಹಾಕುತ್ತಲೇ ಬಂದಿದೆ. ಆದರೆ ಅದೆಷ್ಟೋ ಶಾಲೆಗಳಲ್ಲಿ ತುಂಬ ಮಕ್ಕಳಿದ್ದರೂ ಮೂಲಭೂತ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ತೋರಲಾಗಿದೆ.
ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ವಿಠಲಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಧಕ್ಕಿಂತ ಹೆಚ್ಚಿನ ಕೊಠಡಿಗಳು ಸೋರುತ್ತಲಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಕೊಠಡಿಯಲ್ಲೇ ಜೀವ ಕೈಯಲ್ಲಿ ಹಿಡಿದು ಕುಳಿತುಕೊಂಡು ಸುಮಾರು 60 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.
ಮಕ್ಕಳು , ಶಿಕ್ಷಕರಿಗೂ ಜೀವ ಭಯ:
ವಿಠಲಪೂರದಲ್ಲಿ 1 ರಿಂದ 7ನೇ ತರಗತಿವರೆಗೆ ಶಾಲೆಯಿದೆ. ಒಟ್ಟು 121 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಆದರೆ ಗ್ರಾಮದಲ್ಲಿರುವ ಶಾಲಾ ಕಟ್ಟಡದಲ್ಲಿ 1ನೇ ತರಗತಿಯಿಂದ 4ನೇ ತರಗತಿಯ ಮಕ್ಕಳು ಓದುತ್ತಾರೆ. 5 ರಿಂದ 7ನೇ ತರಗತಿಯ ಮಕ್ಕಳು ಊರ ವಲಯದ ಇನ್ನೊಂದು ಶಾಲಾ ಕಟ್ಟಡದಲ್ಲಿ ಕಲಿಯುತ್ತಾರೆ. ಗ್ರಾಮದ ಶಾಲೆಯಲ್ಲಿ ಓದುವ 1ರಿಂದ 4ನೇ ತರಗತಿಯ ಮಕ್ಕಳಿಗೆ ಬರೀ ಮೂರು ಕೋಣೆಗಳಿವೆ. ಒಟ್ಟು 9 ಕೋಣೆಗಳಲ್ಲಿ 6 ಕೋಣೆ ಶಿಥಲಾವಸ್ಥೆಗೆ ತಲುಪಿದ್ದು ಬೀಗ ಹಾಕಲಾಗಿದೆ. ಮಳೆ ಬಂದರೆ ಸೋರುವ ಮಾಳಿಗೆ, ಅಲ್ಲಲ್ಲಿ ಬಿರುಕು ಬಿಟ್ಟ ಮೇಲ್ಛಾವಣಿಯ ಕೋಣೆಗಳಲ್ಲಿಯೇ ಪಾಠ ಮಾಡುವ ಶಿಕ್ಷಕರಿಗೆ ಕಟ್ಟಡದ ಅವಶೇಷಗಳು ಯಾವಾಗ ಕುಸಿದು ಬೀಳುತ್ತವೆಯೋ ಎಂಬ ಜೀವ ಭಯ ಶಿಕ್ಷಕ ಹಾಗೂ ಮಕ್ಕಳಿಗೂ ಕಾಡುತ್ತಿದೆ.
ಈ ಶಾಲೆಯಲ್ಲಿ ಒಬ್ಬರು ಅತಿಥಿ ಶಿಕಕ್ಷ ಸೇರಿ ಒಟ್ಟು 9 ಜನ ಶಿಕ್ಷಕರಿದ್ದಾರೆ. ಮಕ್ಕಳಿಗೆ 9 ಕೋಣೆಗಳಲ್ಲಿ 2 ಮಾತ್ರ ಚನ್ನಾಗಿವೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಚನ್ನಾಗಿದೆ, ಮಕ್ಕಳಿಗೆ ಅನುಗುಣವಾಗಿ ಶಿಕ್ಷಕರೇನೋ ಇದ್ದಾರೆ. ಆದರೆ ಒಂದರಿಂದ ನಾಲ್ಕನೇ ತರಗತಿಯ ನಲಿ-ಕಲಿ ಮಕ್ಕಳಿಗೆ ಮೂರು ಕೋಣೆಯಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದಾರೆ. ಆಗ ಈಗೋ ಕುಸಿದು ಬೀಳುವ ಕೊಠಡಿಯಲ್ಲಿ ಕುಳಿತು ಕಲಿಯುವ ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ಹೆದರಿಕೆ ಹೆಚ್ಚಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಚಿಂತೆಪಡುವಂತಾಗಿದೆ.

ಮಳೆ ಬಂದರೆ ಶಾಲಾ ಆವರಣ ಜಲಾವೃತ:
ಶಾಲೆಯಲ್ಲಿ ಮಕ್ಕಳಿಗೆ ಕುಡಿಯುವ ನೀರಿಗಾಗಿ ಬೋರವೆಲ್ ಇದೆ, ಆದರೆ ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಶೌಚಾಲಯ ಇದ್ದರೂ ನಿರುಪಯುಕ್ತವಾದ ಹಿನ್ನಲೆಯಲ್ಲಿ ಮಕ್ಕಳಿಗೆ ಬಯಲೇ ಗತಿ ಎನ್ನುವಂತಿದೆ. ಜೋರಾಗಿ ಮಳೆ ಬಂದರೆ ಸಾಕು ಶಾಲಾ ಆವರಣದಲ್ಲಿ ನೀರು ಸಂಗ್ರಹವಾಗಿ ಶಿಕ್ಷಕರಿಗೆ , ಮಕ್ಕಳಿಗೆ ಓಡಾಡಲು ತೊಂದರೆಯಾಗುತ್ತಿದ್ದು, ನೀರು ಹೋಗಲು ದಾರಿಯಿಲ್ಲದ ಕಾರಣ ಎರಡು ದಿನಗಳವರೆಗೂ ನೀರು ಹಾಗೇ ಸಂಗ್ರಹವಾಗಿರುತ್ತದೆ.
“ನಮ್ಮೂರು ಚಿಟಗುಪ್ಪ ತಾಲೂಕಿಗೆ ಸೇರಿದೆ, ಆದರೆ ಬೀದರ್ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ. ನಮ್ಮೂರು ಸರ್ಕಾರಿ ಶಾಲೆಯ ಬಹುತೇಕ ಎಲ್ಲಾ ಕೋಣೆಗಳು ಸೋರುತ್ತಿವೆ, ಶಿಕ್ಷಕರು, ಮಕ್ಕಳಿದ್ದರೂ ಕೊಠಡಿಗಳಿಲ್ಲ ಎಂಬುಂತಾಗಿದೆ, ಹೊಸ ಕೋಣೆ ಮಂಜೂರು ಮಾಡಿ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಶಿಕ್ಷಣ ಇಲಾಖೆ ಇಚ್ಚಾಶಕ್ತಿ ತೋರಿ ಮಕ್ಕಳ ಹಿತ ಕಾಪಾಡಬೇಕೆಂದು” ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು ಹೇಳುತ್ತಾರೆ.
ʼಬಿಸಿಯೂಟʼಕ್ಕಾಗಿ ನಿತ್ಯ ನಡೆಯಬೇಕು:
ಗ್ರಾಮದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಶಾಲೆಯಿದೆ, ಮುಂದಿನ ತರಗತಿ ಕೋಣೆಗಳು ಇಲ್ಲೇ ಕಟ್ಟಬಹುದಿತ್ತು. ಆದರೆ ಊರ ಹೊರಗಿನ ಪ್ರದೇಶದಲ್ಲಿ ನಿರ್ಮಿಸಿದ ಕೋಣೆಯಲ್ಲಿ 5, 6 ಹಾಗೂ 7ನೇ ತರಗತಿಗಳು ನಡೆಯುತ್ತವೆ. ಆದರೆ ಈ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಕುಡಿಯಲು ನೀರು, ಶೌಚಾಲಯ ಇಲ್ಲ. ಸುತ್ತುಗೋಡೆ ಇದ್ದು ಇಲ್ಲದಂತಿದೆ. ಇನ್ನು ಕೋಣೆಗಳ ಬಾಗಿಲು ಮುರಿದು ಹೋಗಿ ದನ-ಕರು, ಆಡು-ಕುರಿ ವಾಸ್ತವ್ಯ ಹೂಡುವಂತಾಗಿವೆ.
“ಮೊದಲು ಕುಡಿಯುವ ನೀರಿಗೆ ಬೋರವೆಲ್ ಇತ್ತು , ಅದೂ ಹಾಳಾಗಿದೆ, ಶೌಚಾಲಯ ಇದೆ, ಬಾಗಿಲು ಮುರಿದು ನಿರುಪಯುಕ್ತವಾಗಿದೆ. ವಿದ್ಯಾರ್ಥಿಗಳು ಪಕ್ಕದ ಹೊಲದವರ ನೀರಿನ ತೊಟ್ಟಿಯಲ್ಲಿ ಬರುವ ಬೋರವೆಲ್ ನೀರು ಬಳಸುತ್ತಾರೆ. ಮಧ್ಯಾಹ್ನ ಬಿಸಿಯೂಟಕ್ಕೆ ದಿನನಿತ್ಯ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗಿ ಊಟ ಮಾಡಿ ಬರುತ್ತಾರೆ” ಎಂದು ಶಿಕ್ಷಕರು ಹೇಳುತ್ತಾರೆ.
ಈ ಶಾಲೆ ಆವರಣದಲ್ಲಿ ಬಿಸಿಯೂಟ ಕೋಣೆಯಿದ್ದರೂ ಅಡುಗೆ ಮಾಡುವುದು ಊರಿನ ಶಾಲೆಯಲ್ಲಿ, ಹೀಗಾಗಿ ಬಿಸಿಯೂಟಕ್ಕೆ ರಸ್ತೆ ದಾಟಿ ಹೋಗುವುದು ಮಕ್ಕಳಿಗೆ ಅನಿವಾರ್ಯವಾಗಿದೆ.
ಈ ಕುರಿತು ಶಾಲಾ ಮುಖ್ಯಗುರು ಸಾವಿತ್ರಿಬಾಯಿ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ಶಾಲಾ ಕೊಠಡಿಗಳ ಶಿಥಿಲಾವಸ್ಥೆ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆ ಮಾಹಿತಿ ಪತ್ರ ಬರೆಯಲಾಗಿದೆ. ಉಳಿದ ಕೋಣೆಗಳ ಛಾವಣಿ ಬಿರುಕು ಬಿಟ್ಟಿವೆ, ಯಾವಾಗ ಬೀಳುತ್ತವೋ ಎಂಬ ಆತಂಕ ನಮಗೂ ಕಾಡುತ್ತಿದೆ. ಶೌಚಾಲಯ ಇದೆ, ಅದು ದುರಸ್ತಿ ಕಾಣದೇ ನಿರುಪಯುಕ್ತವಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | 57 ವರ್ಷಗಳ ಹಿಂದೆ ಎಮ್ಮೆ ಕದ್ದಿದ್ದ ಆರೋಪಿ ಬಂಧನ
ಬೆಮಳಖೇಡ ಗ್ರಾಮ ಪಂಚಾಯತ್ ಪಿಡಿಒ ಸುಶಾಂತ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ವಿಠಲಪೂರ ಶಾಲಾ ಕೋಣೆಗಳ ಶಿಥಲಾವಸ್ಥೆ ಬಗ್ಗೆ ಗಮನಕ್ಕಿದೆ, ಶಾಲೆಯ ಮುಖ್ಯಗುರು ನಮಗೆ ಪತ್ರ ನೀಡಿದ್ದಾರೆ. ನಾನು ಶಿಕ್ಷಣ ಇಲಾಖೆಗೆ ಮಾಹಿತಿ ಸಲ್ಲಿಸಿದ್ದೇನೆ. ಹೊಸ ಕೋಣೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ. ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಪಂಚಾಯತ್‌ದಿಂದ ಮಾಡಿಸಲಾಗುವುದು” ಎಂದು ಹೇಳಿದರು.