ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ರುದ್ರಮುನಿಶ್ವರ ಕಲ್ಯಾಣ ಮಂಟಪದಲ್ಲಿ ಈದಿನ.ಕಾಮ್ʼ ಮಾಧ್ಯಮ ಸಂಸ್ಥೆಯು ಎರಡು ವರ್ಷ ಪೂರೈಸಿದ ಹಿನ್ನಲೆ ಆಯೋಜಿಸಿದ್ದ ʼಈದಿನ ಸಮಾಗಮ ಹಾಗೂ ಮಲೆನಾಡಿನ ಬಿಕ್ಕಟ್ಟುಗಳುʼ ಕುರಿತು ವಿಶೇಷ ʼಸಮಾಗಮʼ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ʼಈದಿನ.ಕಾಮ್ʼ ಮಾಧ್ಯಮದ ಸಂಪನ್ಮೂಲ ವ್ಯಕ್ತಿ ಭರತ್ ಹೆಬ್ಬಾಳ ಮಾತನಾಡಿ, ʼಸಮಾಜದಲ್ಲಿ ನೊಂದ, ನಿರ್ಗತಿಕ, ದೀನ ದಲಿತರ ಸಮಸ್ಯೆಗಳಿಗೆ ಮುಕ್ತಿಗೊಳಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಮಾಜಮುಖಿ ಪತ್ರಿಕೋದ್ಯಮ ನಡೆಸಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ. ಕಳೆದ ಚುನಾವಣೆಗಳಲ್ಲಿ ಕರಾರುವಕ್ಕಾಗಿ ಸಮೀಕ್ಷೆ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದೇವೆ ಎಂದರು. ಈದಿನ ಮಾಧ್ಯಮದ ಮುಂದಿನ ಕಾರ್ಯಗಳೇನು ಹಾಗೂ ಜನರಭಾಗಿತ್ವ ನಮ್ಮೊಂದಿಗೆ ಹೇಗಿರಬೇಕುʼ ಎಂದು ಮಾಹಿತಿ ನೀಡಿದರು.
ಈದಿನ ಕೇಂದ್ರೀಯ ಸಂಯೋಜಕ ಸಂತೋಷ್ ಎಚ್.ಎಂ ಮಾತನಾಡಿ, ʼಈದಿನʼ ಮಾಧ್ಯಮ ಎಂಬುದು ನಾಗರಿಕ ಪತ್ರಕರ್ತರನ್ನು ಹುಟ್ಟು ಹಾಕುವ ಮೂಲಕ ಜನರ ಕುಂದು ಕೊರತೆಗಳಿಗೆ ಜನರೇ ಸುದ್ದಿ ಬರೆಯುವಂತೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ವಿಶಿಷ್ಟ ಮಾಧ್ಯಮವಾಗಿದೆ. ಈದಿನ ಮಾಧ್ಯಮ ಮತ್ತಷ್ಟು ಗಟ್ಟಿಗೊಳಿಸಲು ಈ ಭಾಗದಲ್ಲಿ ಹೆಚ್ಚಿನ ನಾಗರಿಕ ಪತ್ರಕರ್ತರ ಅಗತ್ಯವಿದೆ. ಇದು ಒಂದು ಸಂಸ್ಥೆಯಲ್ಲದೇ ಜನರೇ ರೂಪಿಸಿಕೊಂಡ ಮಾಧ್ಯಮವಾಗಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆʼ ಎಂದು ಹೇಳಿದರು.

ಮಲೆನಾಡಿನ ಬಿಕ್ಕಟ್ಟುಗಳು ಹಾಗೂ ಸಮಸ್ಯೆಗಳಿಗೆ ಮಾಧ್ಯಮ ಸ್ಪಂದಿಸಬೇಕು ಕುರಿತು ಪರಿಸರವಾದಿ
ಡಾ.ಕಲ್ಕುಳಿ ವಿಠಲ ಹೆಗ್ಡೆ ಅವರು ವಿಸ್ತ್ರತವಾಗಿ ವಿವರಿಸಿದರು. ಮಲೆನಾಡಿನ ಪ್ರತಿ ತಾಲೂಕು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಗಮನಕ್ಕೆ ಬರುವಂತೆ ಪ್ರಕಟಿಸಬೇಕು ಎಂದು ತಿಳಿಸಿದರು.
ಈದಿನ ಚಿಕ್ಕಮಗಳೂರು ಜಿಲ್ಲಾ ಸಂಯೋಜಕಿ ಗಿರಿಜಾ ಎಸ್.ಜಿ ಪ್ರಾಸ್ತಾವಿಕವಾಗಿ ಮಾತಾಡಿದರು. ಸಮಾಗಮದಲ್ಲಿ ಭಾಗವಹಿಸಿದ ಈದಿನ ಮಾಧ್ಯಮ ಓದುಗರು ತಮ್ಮ ಅಭಿಪ್ರಾಯ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅತ್ಯಾಚಾರ : 17 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕಾರ್ಯಕ್ರಮದಲ್ಲಿ ಲೇಖಕ ಗುರುಮೂರ್ತಿ ಜೋಗಿಬೈಲು, ರೈತ ಸಂಘಟನೆ ಹಿರಿಯ ಮುಖಂಡ ಸುರೇಶ್ ಭಟ್ರು , ಹಿರಿಯ ಪತ್ರಕರ್ತ ಯಜ್ಞಾಪುರುಷ ಭಟ್ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಂಟು ತಾಲ್ಲೂಕಿನ ಪತ್ರಕರ್ತರು, ಬರಹಗಾರರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಭಾಗವಹಿಸಿದ್ದರು. ಈದಿನ ಜೋನಲ್ ಸಂಯೋಜಕ ಮುಹಮ್ಮದ್ ಶಾರೂಖ್ ನಿರೂಪಿಸಿ, ಸ್ವಾಗತಿಸಿದರು.