ಹೇಗೂ ರೂಢಿಯಾಗಿದೆಯಲ್ಲ.. ಟೊಮ್ಯಾಟೋ ಬೆಲೆ ಇಳಿಯುವವರೆಗೆ ಕಾಯೋಣ

Date:

Advertisements

ಕೋಲಾರ ಸೀಮೆಯಲ್ಲಿ ರೈತರು ನಿರಂತರವಾಗಿ ಟೊಮ್ಯಾಟೋ ಬೆಳೆದರೂ ಅದಕ್ಕೆ ಪರ್ಯಾಯ ಮಾರುಕಟ್ಟೆ ಸೃಷ್ಟಿಸುವಲ್ಲಿ ಸರ್ಕಾರ ಸೋತಿದೆ. ಜೊತೆಗೆ ಟೊಮ್ಯಾಟೋಗೆ ರೋಗಬಾಧೆ ಹೆಚ್ಚಾಗಿ ಇಳುವರಿ ತೀವ್ರವಾಗಿ ಕುಸಿದಿದೆ. ಇದೆಲ್ಲದರ ಪರಿಣಾಮ ಗ್ರಾಹಕರು ಅನುಭವಿಸುವಂತಾಗಿದೆ.

ಚಿನ್ನದ ನಾಡು ಎಂದೇ ಹೆಸರಾದ ಕೋಲಾರ ಟೊಮ್ಯಾಟೋ ಬೀಡು ಕೂಡ ಹೌದು. ಕೋಲಾರ ಎಂದರೆ, ಟೊಮ್ಯಾಟೋ ಬೆಳೆಯನ್ನು ರಸ್ತೆಗೆ ಸುರಿದು ಪ್ರತಿಭಟಿಸುವ ರೈತರ ಚಿತ್ರ ಕಣ್ಣ ಮುಂದೆ ಬರುತ್ತದೆ. ಬೆಲೆ ಕುಸಿತದಿಂದ ಕಂಗೆಟ್ಟು ಹತಾಶೆಯಿಂದ ಹಾಗೆ ಮಾಡುತ್ತಿದ್ದ ರೈತರು ಈ ಬಾರಿ ಕೂಡ ಅದೇ ರೀತಿ ಕಂಗೆಟ್ಟಿದ್ದಾರೆ. ಈ ಬಾರಿ ರೈತರ ಹತಾಶೆಗೆ ಬೆಲೆ ಕುಸಿತ ಕಾರಣವಲ್ಲ; ವರ್ಷದ ಬಹುತೇಕ ದಿನಗಳಲ್ಲಿ ಕೇಜಿಗೆ ಇಪ್ಪತ್ತು ರೂಪಾಯಿ ಆಸುಪಾಸು ಇರುವ ಟೊಮ್ಯಾಟೋ ಬೆಲೆ ಈಗ ಕೇಜಿಗೆ ನೂರು ರೂಪಾಯಿ ದಾಟಿದೆ. ಆದರೆ, ಹೊಲದಲ್ಲಿ ಟೊಮ್ಯಾಟೋ ಹಣ್ಣು ಇಲ್ಲ. ವಾಸ್ತವವೇನೆಂದರೆ, ಹೊಲದಲ್ಲಿ ಟೊಮ್ಯಾಟೋ ಹಣ್ಣು ಇಲ್ಲದಿರುವುದೇ ಈ ಬಾರಿ ಅದರ ಬೆಲೆ ಸೆಂಚುರಿ ಹೊಡೆದು ಮುನ್ನುಗ್ಗಲು ಕಾರಣವಾಗಿದೆ. ಟೊಮ್ಯಾಟೊ ಬೆಲೆ 100ರ ಗಡಿ ದಾಟಲು ಕೋಲಾರ ಜಿಲ್ಲೆಯಲ್ಲಿ ಬೆಳೆಯ ಇಳುವರಿ ತೀವ್ರವಾಗಿ ಕುಸಿದಿರುವುದು ಕೂಡ ಬಹಳ ಮುಖ್ಯ ಕಾರಣವಾಗಿದೆ.      

ಕೋಲಾರದ ಟೊಮ್ಯಾಟೋ ಮಾರುಕಟ್ಟೆ ಪಿಂಪಲ್‌ಗಾಂವ್, ನಾಸಿಕ್ ನಂತರ ದೇಶದ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಟೊಮ್ಯಾಟೋ ಮಾರಕಟ್ಟೆಗಳಲ್ಲೊಂದಾಗಿದೆ. ಇಲ್ಲಿಂದ ಬಾಂಗ್ಲಾದೇಶ, ಆಘ್ಘಾನಿಸ್ತಾನ, ಪಾಕಿಸ್ತಾನ, ಚೀನಾ ಮುಂತಾದ ದೇಶಗಳಿಗೆ ಟೊಮ್ಯಾಟೋ ಹೋಗುತ್ತದೆ. ಕೋಲಾರದಿಂದ ದಿನವೂ ಸುಮಾರು 20 ಲಾರಿಗಳಷ್ಟು- ಆರು ಸಾವಿರ ಕ್ವಿಂಟಾಲ್‌ನಷ್ಟು- ಟೊಮ್ಯಾಟೋ ಬಾಂಗ್ಲಾದೇಶಕ್ಕೆ ರಫ್ತಾಗುತ್ತಿತ್ತು. ಸುಮಾರು 500 ಕೋಟಿವರೆಗೆ ವಹಿವಾಟು ನಡೆಯುತ್ತಿತ್ತು. ಈಗ ದೇಶೀಯ ಬಳಕೆಗೆ ಸಿಗುವಷ್ಟು ಬೆಳೆ ಇಲ್ಲ.

Advertisements

ಕೋಲಾರ ಜಿಲ್ಲೆಯ ಸುಮಾರು 10,000 ಎಕರೆಗಳಲ್ಲಿ ಟೊಮ್ಯಾಟೋ ಬೆಳೆಯುತ್ತಾರೆ. ಅದರಲ್ಲೂ ಮುಳಬಾಗಿಲು ಮತ್ತು ಶ್ರೀನಿವಾಸಪುರದ ತಾಲ್ಲೂಕುಗಳ ಹೆಚ್ಚಿನ ರೈತರ ನೆಚ್ಚಿನ ಬೆಳೆ ಟೊಮ್ಯಾಟೋ. ಕಳೆದ ಇಪ್ಪತ್ತೈದು ವರ್ಷಗಳಿಂದ ಕೋಲಾರದಲ್ಲಿ ಬೆಳೆಯುವ ಮುಖ್ಯ ಬೆಳೆಯೇ ಇದು. ಹೈಬ್ರಿಡ್ ಹಾಗೂ ನಾಟಿ ಟೊಮ್ಯಾಟೋ ಎರಡೂ ತಳಿಗಳನ್ನು ಬೆಳೆಯುವ ಇಲ್ಲಿನ ರೈತರು ಕನಿಷ್ಠ ಬೆಲೆ ಸಿಕ್ಕರೂ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದರು. ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ತಮಿಳುನಾಡು, ಗುಜರಾತ್ ಮುಂತಾದ ರಾಜ್ಯಗಳಿಂದಲೂ ಇಲ್ಲಿನ ಟೊಮ್ಯಾಟೋಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಟೊಮ್ಯಾಟೋ ಇಲ್ಲಿಂದ ಇಡೀ ದೇಶಕ್ಕೆ ಪೂರೈಕೆ ಆಗುತ್ತದೆ.

ಟೊಮ್ಯಾಟೋ ಮಾರುಕಟ್ಟೆ

ಆದರೆ, ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋಗೆ ನಾನಾ ವಿಧದ ರೋಗಗಳು ಮಾರಕವಾಗಿ ಪರಿಣಮಿಸಿವೆ. ಗುಣಮಟ್ಟದ ಬೀಜಗಳು ಸಿಗದೇ ನಾನಾ ಕಂಪನಿಗಳ ನಾನಾ ರೀತಿಯ ತಳಿಗಳು ಬಂದು ಅದರ ರೋಗಗಳು ಹಾಗೂ ಗುಣಮಟ್ಟ ಮೊದಲಿಗಿಂತ ಕಡಿಮೆಯಾಗಿದೆ. ಒಳ್ಳೆ ಬೆಲೆ ಇದ್ದರೂ ಟೊಮ್ಯಾಟೋ ಬೆಳೆ ಕೈಗೆ ಹತ್ತದೇ ಇರುವುದು ರೈತರಿಗೆ ಸಂಕಷ್ಟ ತಂದಿದೆ. ಟೊಮ್ಯಾಟೊ ಇಳುವರಿಯೇ ಕಡಿಮೆಯಾಗಿಬಿಟ್ಟಿದೆ. ಕೋಲಾರದ ಎಪಿಎಂಸಿಗೆ ಈ ವರ್ಷದ ಜೂನ್‌ನಲ್ಲಿ 3.2 ಲಕ್ಷ ಕ್ವಿಂಟಾಲ್‌ ಟೊಮ್ಯಾಟೋ ಬಂದಿತ್ತು. ಅದೇ ಕಳೆದ ವರ್ಷದ ಜೂನ್‌ನಲ್ಲಿ 5.45 ಲಕ್ಷ ಕ್ವಿಂಟಾಲ್ ಬಂದಿತ್ತು. ಇದು 2021ರಲ್ಲಿ 9.37 ಲಕ್ಷ ಕ್ವಿಂಟಾಲ್‌ಗೆ ಮುಟ್ಟಿತ್ತು. ಆದರೆ, ಈ ಬಾರಿ ಎಲೆ ಮುದುರು ರೋಗ ಸೇರಿದಂತೆ ಹಲವು ರೋಗಗಳು ಅಡರಿಕೊಂಡು ಇಳುವರಿ ತೀವ್ರವಾಗಿ ಕುಸಿದಿದೆ.

ಟೊಮ್ಯಾಟೋಗೆ ಮೂರು ಬಣ್ಣದ ಸೊಳ್ಳೆ, ಮೂರು ತರದ ಊಜಿ ಕಟ್ಟ, ಕಪ್ಪುಚುಕ್ಕೆ, ಎಲೆ ಮುದುರು ರೋಗ, ಟ್ರಿಪ್ಸ್‌, ವೈರಸ್‌, ಬೂದಿ ರೋಗ, ಹಣ್ಣಾಗುವ ಹೊತ್ತಿಗೆ ಬರುವ ಜಾಂಡೀಸ್, ರೋಸ್‌, ಅಂಗನಾರಿ ಈ ರೀತಿಯ ಹಲವು ರೋಗಗಳು ಬರುತ್ತಿವೆ. ಇವುಗಳನ್ನು ಹೋಗಲಾಡಿಸಲು ರೈತರು ವಾರಕ್ಕೆರಡು ಬಾರಿ ಪೆಸ್ಟಿಸೈಡ್‌ಗಳನ್ನು ಬಳಸುತ್ತಿದ್ದಾರೆ. ಆದರೂ ರೋಗಬಾಧೆ ಕಡಿಮೆಯಾಗಿಲ್ಲ. ಟೊಮ್ಯಾಟೋ ಇಳುವರಿ ಹೆಚ್ಚಾಗಿಲ್ಲ.

ಎಕರೆಗೆ 45,000 ಕೇಜಿವರೆಗೆ ಬರುತ್ತಿದ್ದ ಇಳುವರಿ ಈಗ 9,000 ಕೇಜಿಗೆ ಇಳಿದಿದೆ. ಅರ್ಧಕ್ಕಿಂತಲೂ ಹೆಚ್ಚು ಬೆಳೆಯನ್ನು ಬಲಿ ಪಡೆದಿದೆ. ಹಣ್ಣುಗಳ ಗುಣಮಟ್ಟವೂ ಕೂಡ ಕುಸಿದಿದೆ. ಎರಡು ದಿನದಲ್ಲೇ ಹಣ್ಣು ತನ್ನ ಬಿಗುವನ್ನು ಕಳೆದುಕೊಳ್ಳುತ್ತಿದೆ.

ಕಳೆದ ಎರಡು ವರ್ಷಗಳಿಂದ ಹವಾಮಾನ ಬದಲಾಗಿರುವುದು, ಗುಣಮಟ್ಟದ ಬೀಜಗಳ ಕೊರತೆ, ಕೆ ಸಿ ವ್ಯಾಲಿಯ ಗಲೀಜು ನೀರು ಇವೆಲ್ಲವೂ ಟೊಮ್ಯಾಟೋಗೆ ರೋಗ ಅಂಲು ಕಾರಣವಾಗಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

 ಒಂದು ಎಕೆರೆಗೆ ಭೂಮಿಯಲ್ಲಿ ನಾಲ್ಕರಿಂದ ಆರು ಸಾವಿರ ಸಸಿ ನಾಟಿ ಮಾಡಲಾಗುತ್ತದೆ. ಈ ಒಂದು ಎಕರೆಯಲ್ಲಿ ಸಸಿ ನಾಟಿ ಮಾಡುವುದರಿಂದ ಹಿಡಿದು ಹಣ್ಣು  ಬಿಡುವ ತನಕ ಆಗುವ ಖರ್ಚು, ಇವತ್ತಿನ ಲೆಕ್ಕದ ಪ್ರಕಾರ ಎರಡರಿಂದ ಮೂರು ಲಕ್ಷ ರೂಪಾಯಿ. ಬೀಜ, ಸಸಿ ಬೆಳೆಸುವುದು, ನಾಟಿ ಮಾಡುವ ಕೂಲಿ, ಮಾರ್ಕೆಟ್ ಕಮಿಷನ್‌, ತೋಟಕ್ಕೆ ಹಾಕಿರುವ ವ್ಯವಸಾಯದ ಖರ್ಚು, ಭೂಮಿ ಕಡ್ಡಿ ಸ್ವಚ್ಛ ಮಾಡುವುದು, ಕೂಲಿಕಾರರ ಖರ್ಚು, ಸೆಣಬು, ಮಲ್ಚಿಂಗ್‌ ಪೇಪರ್‌, ಟ್ರೀಟ್‌ ಕಟ್ಟು, ಔಷಧಿ, ಗೊಬ್ಬರ, ಸಾಗಣೆ ಖರ್ಚು ಇತ್ಯಾದಿ ಸೇರಿ ಒಂದು ಎಕರೆಗೆ ಅಷ್ಟು ಖರ್ಚು ತಗಲುತ್ತದೆ.

ಟೊಮ್ಯಾಟೋ ಬೆಳೆ

ವಿಚಿತ್ರ ಎಂದರೆ, ತರಕಾರಿ ಅಂಗಡಿಗಳಲ್ಲಿ ಟೊಮ್ಯಾಟೋ ಬೆಲೆ ಎಷ್ಟೇ ಏರಿದ್ದರೂ ಅದರ ಫಲ ರೈತರಿಗೆ ಸಿಗುವುದಿಲ್ಲ. ಇಷ್ಟು ದಿನ ರೈತರಿಗೆ 15 ಕೇಜಿಯ ಒಂದು ಬುಟ್ಟಿಗೆ 300ರಿಂದ 1250 ರೂಪಾಯಿ ಸಿಗುತ್ತಿತ್ತು. ಈಗ ಅದು 350ರಿಂದ 1500ಕ್ಕೆ ಹೆಚ್ಚಳವಾಗಿದೆ, ಅಷ್ಟೇ.        

ಕೋಲಾರ ಸೀಮೆಯಲ್ಲಿ ರೈತರು ನಿರಂತರವಾಗಿ ಟೊಮ್ಯಾಟೋ ಬೆಳೆದರೂ ಅದಕ್ಕೆ ಪರ್ಯಾಯ ಮಾರುಕಟ್ಟೆ ಸೃಷ್ಟಿಸುವಲ್ಲಿ ಸರ್ಕಾರ ಸೋತಿದೆ. ಟೊಮ್ಯಾಟೋ ಜ್ಯೂಸ್ ಫ್ಯಾಕ್ಟರಿ ಮಾಡುವುದು, ಕೊಳೆತ ಹಣ್ಣುಗಳಿಂದ ಗ್ಯಾಸ್‌ ತಯಾರು ಮಾಡುವುದು, ಉಪ್ಪಿನಕಾಯಿ ಫ್ಯಾಕ್ಟರಿ ಮಾಡುವುದು, ಮೀನು ಸಂಸ್ಕರಣೆ ಉದ್ದಿಮೆಗೆ ಟೊಮ್ಯಾಟೋ ಬಳಸುವುದು ಇತ್ಯಾದಿಯಾಗಿ ಸರ್ಕಾರದ ಮುಂದೆ ಹಲವು ದಾರಿಗಳಿದ್ದವು. ಆದರೆ, ಸರ್ಕಾರ ಇದ್ಯಾವುದನ್ನೂ ಮಾಡಲಿಲ್ಲ. ಮುಂದೆ ಮಾಡುವ ಸಾಧ್ಯತೆ ಕೂಡ ಇಲ್ಲ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಮನುಷ್ಯಪ್ರೀತಿ ಹಂಚುವ `ಮುಸ್ತಾಫಾ’ ಈ ಕಾಲದ ಅಗತ್ಯ

ನಮ್ಮ ಇದುವರೆಗಿನ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ರೈತರು ಮತ್ತು ಗ್ರಾಹಕರು ಇಬ್ಬರೂ ಸಮಸ್ಯೆ ಎದುರಿಸಬೇಕಾಗಿದೆ. ಭಾರತದ ಯಾವ ರಾಜ್ಯದಲ್ಲಿಯೂ ಈ ಋತುವಿನಲ್ಲಿ ಟೊಮ್ಯಾಟೋ ಬೆಳೆಯುವುದಿಲ್ಲ. ಹೆಚ್ಚು ಹಣ ತೆರಬೇಕಾಗಿದೆ. ಟೊಮ್ಯಾಟೋ ಹೊಸ ಬೆಳೆ ಬರಬೇಕೆಂದರೆ, ಇನ್ನು 70ರಿಂದ 100 ದಿನ ಬೇಕಾಗುತ್ತೆ.  

ಹೀಗೆ ಟೊಮ್ಯಾಟೋ ಬೆಲೆ ಗಗನಕ್ಕೇರಿ ಕೂತಾಗಲೆಲ್ಲ ಸಮಸ್ಯೆ ಬಗ್ಗೆ ಯೋಚಿಸದೇ, ಪರಿಹಾರಕ್ಕಾಗಿ ಒತ್ತಾಯಿಸದೇ ಬೆಲೆ ಇಳಿಯುವವರೆಗೆ ಕಾಯುವುದು ನಮಗೆ ರೂಢಿಯಾಗಿದೆಯಲ್ಲ; ಕಾಯೋಣ.     

ಹೇಗೂ ರೂಢಿಯಾಗಿದೆಯಲ್ಲ.. ಟೊಮ್ಯಾಟೋ ಬೆಳೆ ಇಳಿಯುವವರೆಗೆ ಕಾಯೋಣ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X