ಕಳೆದ ಒಂದು ವಾರದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿನ ಅಸಹಜ ಸಾವುಗಳ ಮಾಹಿತಿ ಇರುವ ವ್ಯಕ್ತಿ ಪೊಲೀಸ್ ಶರಣಾಗತಿ ಆಗುತ್ತೇನೆ ಎಂದು ವಕೀಲರ ಮೂಲಕ ಬರೆದಿದ್ದ ಪತ್ರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದೀಗ ಆ ಪತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ತಂಡವೊಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರನ್ನು ಭೇಟಿ ಮಾಡಲು ಮಂಗಳೂರಿಗೆ ಆಗಮಿಸಿತ್ತಾದರೂ, ಎಸ್‌ಪಿಯವರು ಭೇಟಿಗೆ ಸಿಗದ ಕಾರಣ ಹಿಂದಿರುಗಿದ ಬೆಳವಣಿಗೆ ನಡೆದಿದೆ.
ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಕುರಿತ ವೈರಲ್ ಪತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ನೇತೃತ್ವದ ಆರು ಮಂದಿ ವಕೀಲರ ನಿಯೋಗ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅರುಣ್ ಅವರನ್ನು ಭೇಟಿಯಾಗಲು ಶುಕ್ರವಾರ ಮಂಗಳೂರಿಗೆ ಆಗಮಿಸಿತ್ತು. ಆದರೆ ಎಸ್‌ಪಿಯವರ ಅನುಪಸ್ಥಿತಿ ಹಿನ್ನಲೆ ತಂಡಕ್ಕೆ ಎಸ್ಪಿ ಭೇಟಿ ಸಾಧ್ಯವಾಗಿಲ್ಲ. ಎಸ್‌ಪಿಯವರು ಇಲಾಖೆಯ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದಾರೆಂದು ತಿಳಿದ ಬಳಿಕ, ಕಚೇರಿಯಿಂದ ಹಿಂದಿರುಗಿದ್ದಾರೆ.
ವಕೀಲರ ಭೇಟಿಯ ಬಗ್ಗೆ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿಯ ಬಳಿ ಮಾಧ್ಯಮಗಳ ದಂಡೇ ನೆರೆದಿತ್ತು. ತಮ್ಮ ಕಾರಿನಲ್ಲೇ ಕುಳಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಕೀಲ ಓಜಸ್ವಿ ಗೌಡ, “ಪೊಲೀಸರಿಗೆ ಶರಣಾಗತಿ ಆಗಲು ಬಯಸಿದ್ದ ವ್ಯಕ್ತಿಯು ನಮ್ಮ ಮೂಲಕವೇ ಪತ್ರವನ್ನು ಬರೆದಿದ್ದಾರೆ. ಇದು ಸತ್ಯಾಂಶದಿಂದ ಕೂಡಿದೆ. ಈ ಬಗ್ಗೆ ಎಸ್‌ಪಿಯವರ ಜೊತೆ ಮಾತನಾಡಲು ಬಂದಿದ್ದೆವು. ಎಸ್‌ಪಿ ಜೊತೆ ಮಾತನಾಡಲು ಇರುವ ವಿಚಾರದ ಬಗ್ಗೆ ಸದ್ಯ ಯಾವುದೇ ಮಾಹಿತಿ ನೀಡಲು ಬಯಸುವುದಿಲ್ಲ. ನೋ ಕಮೆಂಟ್ಸ್” ಎಂದರು.

“ಎಸ್‌ಪಿಯವರ ಭೇಟಿ ಮಾಡಿ ಎಲ್ಲ ವಿಚಾರಗಳನ್ನು ತಿಳಿಸಲೆಂದು ಬಂದಿದ್ದೆವು. ಆದರೆ ಅವರು ಇವತ್ತು ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಬಂದ ಬಳಿಕವಷ್ಟೇ ತಿಳಿಯಿತು. ನಾವು ಅವರನ್ನೇ ಕಾಣಬೇಕಿದೆ. ಹಾಗಾಗಿ, ಇದರ ಬಗ್ಗೆ ಯಾವುದೇ ಕಮೆಂಟ್ಸ್ ಮಾಡಲ್ಲ. ಪತ್ರದಲ್ಲಿನ ವಿಚಾರ ಎಲ್ಲವೂ ಸತ್ಯ” ಎಂದು ವಕೀಲ ಓಜಸ್ವಿ ಗೌಡ ತಿಳಿಸಿದರು.
ಏನಿದು ಬೆಳವಣಿಗೆ?
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆಗಳು ಮತ್ತು ಅತ್ಯಾಚಾರಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಗೆ ಬಂದು ಶರಣಾಗುತ್ತೇನೆಂದು ವ್ಯಕ್ತಿಯೊಬ್ಬ ಬರೆದಿರುವ ಪತ್ರ ವೈರಲ್ ಆಗಿತ್ತು. ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಎಂಬವರ ಹೆಸರಿನಲ್ಲಿ ಈ ಪತ್ರ ಹರಿದಾಡಿತ್ತು.
ಪತ್ರದಲ್ಲಿ,”ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರತೆಗೆದ ಕಳೇಬರವೊಂದನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ” ಎಂದು ಉಲ್ಲೇಖಿಸಲಾಗಿತ್ತು.