ಉಡುಪಿ ಜಿಲ್ಲೆಯ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕ ಭಾಗದಲ್ಲಿನ ಟೋಲ್ ಗೇಟ್ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಮೂಲಕ ಕಾರ್ಯಾದೇಶವಾಗಿ ಅ 16 ರಿಂದ ವಸೂಲಾತಿಗೆ ಸಿದ್ಧಗೊಳ್ಳುತ್ತಿದ್ದು, ಗುತ್ತಿಗೆದಾರ ಸಂಸ್ಥೆ ಕಳೆದ ಶನಿವಾರ ಬೆಳಗ್ಗೆ ಭೂಮಿ ಪೂಜೆ -ನಡೆಸಿ ಟೋಲ್‌ಗೇಟ್ ಕಾಮಗಾರಿಗೆ ಮುಂದಾಗಿತ್ತು. ಈ ಸುದ್ದಿ ತಿಳಿದು ಸ್ಥಳಕ್ಕೆ -ಧಾವಿಸಿದ ಕರ್ನಾಟಕ ರಕ್ಷಣಾ ವೇದಿಕೆ, ಪರಿಸರದ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.

ಈ ಸಂಬಂಧ ಪಡುಬಿದ್ರಿ ಉದಯಾದ್ರಿ ದೇವಸ್ಥಾನದ ಬಳಿ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಗೆ ಕಂಚಿನಡ್ಕದಲ್ಲಿ ಅವೈಜ್ಞಾನಿಕ ಟೋಲ್‌ಗೇಟ್ ನಿರ್ಮಾಣ ಹುನ್ನಾರದ ವಿರುದ್ಧ ಬೃಹತ್ ಜನಾಗ್ರಹ ಸಭೆಯನ್ನು ನಡೆಸಲಾಯಿತು. ಈ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹೋರಾಟಗಾರ ದೀಪಕ್ ಕಾಮತ್ ಕಾಂಜರಕಟ್ಟೆ, “ಕಂಚಿನಡ್ಕ ಪ್ರದೇಶದಲ್ಲಿ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜನಾಗ್ರಹ ಸಭೆಯ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯ ಜನವಿರೋಧಿಯಾಗಿರುವ ಈ ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ 40 ಹಳ್ಳಿಗಳ ಜನರು ಸೇರಿಕೊಂಡು ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲು ಸಿದ್ಧ. ಜನರ ವಿರೋಧದ ನಡುವೆಯೂ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಸರಕಾರ ಮುಂದಾದರೆ, ಮುಂದೆ ಆಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸಭೆಯ ಮೂಲಕ ನೀಡುತ್ತಿದ್ದೇವೆ” ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಹೋರಾಟಗಾರ ವಕೀಲರೂ ಆದ ಬೆಳ್ಮಣ್ ಸರ್ವಜ್ಞ ತಂತ್ರಿ, “ಬುದ್ಧಿವಂತರ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ. ಕಳೆದ 10 ವರ್ಷಗಳ ಹಿಂದೆ ಯಾವುದೇ ಸರ್ವೀಸ್ ರಸ್ತೆ ಇಲ್ಲದೆ, ಚರಂಡಿ ವ್ಯವಸ್ಥೆ ಇಲ್ಲದೆ ನಿರ್ಮಾಣಗೊಂಡ 40 ಗ್ರಾಮಗಳ ವ್ಯಾಪ್ತಿಯಲ್ಲಿರುವ 61 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 28 ಕಿ.ಮೀ. ಪಡುಬಿದ್ರಿ -ಕಾರ್ಕಳ ರಾಜ್ಯ ಹೆದ್ದಾರಿಗೆ ಸುಂಕ ವಸೂಲಾತಿ ಕೇಂದ್ರ ನಿರ್ಮಾಣಕ್ಕೆ ಮುಂದಾಗುವ ಬದಲು ಸರಕಾರದ ಭಿಕ್ಷಾ ಪಾತ್ರೆಯನ್ನು ಸಂತೆ ಜಾತ್ರೆಗಳಲ್ಲಿ ಇರಿಸುವುದು ಸೂಕ್ತ. ಜನರ ಬೆನ್ನಿಗೆ ಚೂರಿ ಹಾಕುವ ಕೆಲಸ ಏಕೆ? ಜನರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯುವ ಜನವಿರೋಧಿ ಕಂಚಿನಡ್ಕ ಟೋಲ್‌ಗೇಟ್ ನಿರ್ಮಾಣ ಇಲ್ಲಿಗೇ ನಿಲ್ಲಬೇಕು” ಎಂದು ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, “ಕಂಚಿನಡ್ಕದಲ್ಲಿ ಟೋಲ್ ಗೇಟ್ ಅಳವಡಿಕೆಗೆ ಮುಂದಾಗುವ ದುರಾಲೋಚನೆ ಬದಿಗಿರಿಸಲಿ. ಕೇವಲ 9 ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್ ನಿರ್ಮಾಣ ಸರಿಯಾದುದಲ್ಲ. ಪ್ರಸ್ತುತ ಆಡಳಿತದಲ್ಲಿ ಅಭಿವೃದ್ಧಿಯ ವಿಚಾರವೇ ಇಲ್ಲವಾಗಿದ್ದು, ಕೇವಲ ಹೋರಾಟದ ಮೂಲಕವೇ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಚಿಂಚೋಳಿ | ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ ರೇಷ್ಮೆ ಕಾರ್ಖಾನೆಯ ಕೆಟ್ಟ ವಾಸನೆ: ಹೊಸ ಕಟ್ಟಡ ಲಭಿಸಿದರೂ ಕೂರಲಾಗದ ದುಃಸ್ಥಿತಿ!
ಕ್ಷೇತ್ರದ ಜನಪ್ರತಿನಿಧಿಗಳಾಗಲೀ, ನಾಗರೀಕರಾಗಲೀ ಕೈ ಬಳೆ ತೊಟ್ಟಿಲ್ಲ. ಧರ್ಮಾತೀತ, ಪಕ್ಷಾತೀತವಾಗಿ ಯಾವುದೇ ಆಮಿಷಕ್ಕೆ ಬಲಿಯಾಗದೇ ಒಗ್ಗಟ್ಟಿನ ಹೋರಾಟದ ಮೂಲಕ ಟೋಲ್‌ಗೇಟ್ ನಿರ್ಮಾಣವನ್ನು ಉಗ್ರ ಹೋರಾಟದ ಮೂಲಕ ಬಡಿದಟ್ಟುತ್ತೇವೆ. ಒಂದೇ ತಾಯಿಯ ಮಕ್ಕಳಂತೆ ದೇವರನ್ನು ಮುಂದಿರಿಸಿ, ಸ್ವಾರ್ಥ ರಹಿತ ಗಟ್ಟಿ ಧ್ವನಿಯಾಗಿ ಶಾಸಕನಾಗಿ ಹೋರಾಟಗಾರರೊಂದಿಗೆ ಹೋರಾಟದ ಅಖಾಡದಲ್ಲಿರುತ್ತೇನೆ ಎಂದು ಹೇಳಿದರು.
