ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳು ಲಭಿಸುತ್ತಿಲ್ಲ ಎಂಬ ಸುದ್ದಿಗಳು ಕೇಳಿಬರುತ್ತಿದೆ. ಇದರ ನಡುವೆಯೇ ಶಾಲೆಗೆ ಹೊಸ ಕಟ್ಟಡ ಲಭಿಸಿದರೂ ಕೂಡ, ವಿದ್ಯಾರ್ಥಿಗಳು ಕೂರಲಾಗದ ದುಃಸ್ಥಿತಿಯೊಂದು ಬಂದೊಂದಗಿದೆ. ಅದಕ್ಕೆ ಕಾರಣವಾಗಿರುವುದು ಹತ್ತಿರದಲ್ಲೇ ಇರುವ ರೇಷ್ಮೆ ಕಾರ್ಖಾನೆಯ ಕೆಟ್ಟ ವಾಸನೆ.
ಹೌದು. ಕಲಬುರಗಿ ಜಿಲ್ಲೆಯ ಶಾಲೆಯೊಂದಕ್ಕೆ ಸುಂದರ, ಸೂಕ್ತ ಸಮರ್ಪಕ ನಿರ್ವಹಣೆ ಹೊಂದಿರುವ ಶಾಲಾ ಕಟ್ಟಡ ಕಣ್ಣ ಮುಂದೆ ಇದ್ದರೂ ಕೂಡ ಲುಂಬಿನಿ ರೇಷ್ಮೆ ಸಂಸ್ಥೆಯ ದುರ್ವಾಸನೆಯಿಂದಾಗಿ ಉಪಯೋಗಿಸಲು ಸಾಧ್ಯವಾಗದ ಪರಿಸ್ಥಿತಿ ತಂದೊಡ್ಡಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ ಹೆಚ್ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಿದ್ದರೂ ಕೂಡ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಶಾಲೆಯ ಇನ್ನೂರು ಮೀಟರ್ ದೂರದಲ್ಲಿ ಲುಂಬಿನಿ ರೇಷ್ಮೆ ಕಾರ್ಖಾನೆ. ಕಾರ್ಖಾನೆಯಿಂದ ವಿಪರೀತ ದುರ್ವಾಸನೆ ಹೊರಬರುತ್ತಿರುವ ಆರೋಪ ಕೇಳಿಬಂದಿದೆ.
ವಾಸನೆಯಿಂದಾಗಿ ಶಾಲಾ ಮಕ್ಕಳು ಹೊಟ್ಟೆ ನೋವು, ವಾಂತಿ, ಭೇದಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಲವು ವಿದ್ಯಾರ್ಥಿಗಳು ಈ ವಾಸನೆ ಸಹಿಸಲಾರದೆ ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೇ, ಶಿಕ್ಷಕರು ಕೂಡ ಕೆಟ್ಟ ವಾಸನೆಯ ಬಲಿಪಶುಗಳಾಗಿದ್ದು, ಆಸ್ಪತ್ರೆಗೆ ದಾಖಲಾದ ಬೆಳವಣಿಗೆ ಕೂಡ ನಡೆದಿದೆ. ಈ ಕೆಟ್ಟ ವಾಸನೆ ಸಹಿಸಲಾಗದೇ, ಕೊನೆಗೆ ಹೊಸ ಕಟ್ಟಡದ ಬದಲು ಹಳೆ ಶಾಲೆಯಲ್ಲೇ ತರಗತಿಗಳನ್ನು ನಡೆಸುವ ಅನಿವಾರ್ಯತೆ ಸದ್ಯ ಬಂದೊದಗಿದೆ.
ಹಳೆ ಕಟ್ಟಡದಲ್ಲಿ ಎಲ್ಲ ತರಗತಿಗಳು ನಡೆಸಲು ಸಾಧ್ಯವಾಗುತ್ತಿಲ್ಲ. ಒಂದೇ ಕೋಣೆಯಲ್ಲಿ ಮೂರು ಮೂರು ತರಗತಿಯ ವಿದ್ಯಾರ್ಥಿಗಳಿಗೆ ಒಟ್ಟಿಗೆ ಕುಳ್ಳಿರಿಸಿ, ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಎಲ್‌ಕೆಜಿ, ಯುಕೆಜಿ ತರಗತಿಯ ಮಕ್ಕಳಿಗೆ ಕೂರಿಸಲು ಸರಿಯಾದ ಜಾಗವಿಲ್ಲದೆ ಶಾಲೆಯ ಆವರಣದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕದ ಶೆಡ್‌ನ ನೆರಳಿನಲ್ಲಿ ಪಾಠ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಈ ಬೆಳವಣಿಗೆಯ ಬಗ್ಗೆ ಶಾಲೆಯ ಶಿಕ್ಷಕರಾದ ಸಿದ್ಧಾರೋಡ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಲುಂಬಿನಿ ರೇಷ್ಮೆ ಕಾರ್ಖಾನೆಯ ಕೆಟ್ಟ ವಾಸನೆಯಿಂದಾಗಿ ಹೊಸ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬಂದಿದೆ. ಹಳೆ ಕಟ್ಟಡದಲ್ಲಿ ತರಗತಿಗಳು ನಡೆಸುತ್ತಿದ್ದೇವೆ. ಈ ಶಾಲೆಯಲ್ಲಿ ಬರೀ ನಾಲ್ಕು ಕೋಣೆಗಳು ಇದ್ದು ಮಳೆಗಾಲದಲ್ಲಿ ಕೋಣೆಗಳು ಸೋರುತ್ತವೆ” ಎಂದು ನೋವು ತೋಡಿಕೊಂಡಿದ್ದಾರೆ.
“ರೇಷ್ಮೆ ಕಾರ್ಖಾನೆಯ ಸಮಸ್ಯೆಯಿಂದಾಗಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಗ್ರಾಮ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ಮಾಡಲಾಗಿದೆ. ವಿದ್ಯಾರ್ಥಿಗಳ ಪಾಲಕರ ಗಮನಕ್ಕೂ ಕೂಡ ತರಲಾಗಿದೆ. ಆದರೂ, ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ” ಎಂದು ತಿಳಿಸಿದರು.
ಶಾಲೆಯ ಶಿಕ್ಷಕಿ ಗೀತಾ ಅವರು ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಹೊಸ ಕಟ್ಟಡದ ಸುಂದರವಾದ ಕೋಣೆಗಳಲ್ಲಿ LKG, UKG ಮಕ್ಕಳಿಗಾಗಿ ಗೋಡೆಗಳಲ್ಲಿ ವರ್ಣರಂಜಿತ ಚಿತ್ರಕಲೆಗಳನ್ನು ರಚಿಸಲಾಗಿದೆ. ಆದರೆ ಅದನ್ನು ನೋಡುವ ಭಾಗ್ಯ ನಮ್ಮ ಮಕ್ಕಳಿಗಿಲ್ಲ. ಮಕ್ಕಳಿಗೆ ಕುಳಿತುಕೊಳ್ಳಲು ವ್ಯವಸ್ಥಿತವಾಗಿ ಕುರ್ಚಿಗಳು ಇವೆ. ಆದರೆ ಅವುಗಳು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ರೇಷ್ಮೆ ಕಾರ್ಖಾನೆಯಿಂದ ಹೊರಬರುವವ ಕೆಟ್ಟ ವಾಸನೆಯನ್ನು ಮಕ್ಕಳಿಗೆ ಸಹಿಸಿಕೊಳ್ಳುವ ಸಾಮರ್ಥ್ಯ ಇಲ್ಲ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಳೆ ಕಟ್ಟಡದಲ್ಲಿಯೇ ತರಗತಿ ನಡೆಸುತ್ತಿದ್ದೇವೆ. ಇದಕ್ಕೆ ಆದಷ್ಟು ಬೇಗ ಪರಿಹಾರ ಸಿಗಬೇಕು” ಎಂದು ಆಗ್ರಹಿಸಿದರು.
ಏಳನೇ ತರಗತಿ ವಿದ್ಯಾರ್ಥಿ ಅರ್ಚನಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಾರ್ಖಾನೆಯಿಂದ ಹೊರಬರುವ ವಾಸನೆಯಿಂದಾಗಿ ತುಂಬಾ ತೊಂದರೆ ಆಗುತ್ತಿದೆ. ನಮ್ಮ ಶಾಲೆಯ ಇಬ್ಬರು ಶಿಕ್ಷಕರು ವಾಸನೆ ಸೇವಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಲೆಯ ಬಾಗಿಲು ಕಿಟಕಿ ಮುಚ್ಚಿ ಪಾಠ ಮಾಡಿದ್ರೂ ಕೂಡ ವಾಸನೆ ತಡಿಯೋಕೆ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಕಾರ್ಖಾನೆಯ ವಾಸನೆಯಿಂದ ಮುಕ್ತಿ ಕೊಡಿ” ಎಂದು ಕೇಳಿಕೊಂಡರು.
8ನೇ ತರಗತಿ ವಿದ್ಯಾರ್ಥಿ ರೆಹಾನ್ ಮಾತನಾಡಿ, “ನಮ್ಮ ಶಾಲೆಯ ಹಳೆಯ ಕಟ್ಟಡ ಸೋರುತ್ತವೆ. ಹೊಸ ಶಾಲೆಗೆ ಹೋಗಬೇಕೆಂದರೆ ಅಲ್ಲಿ ರೇಷ್ಮೆ ಕಾರ್ಖಾನೆ ಇದೆ. ಅದರಿಂದ ಬರುವ ವಾಸನೆಯಿಂದಾಗಿ ಅಲ್ಲಿ ನಮಗೆ ಕುಳಿತುಕೊಳ್ಳಲಾಗುತ್ತಿಲ್ಲ. ಅನೇಕ ವಿದ್ಯಾರ್ಥಿಗಳು ತಲೆಸುತ್ತು ಬಂದು ಬಿದ್ದಿದ್ದಾರೆ” ಎಂದು ನೋವು ತೋಡಿಕೊಂಡರು.
ವಿದ್ಯಾರ್ಥಿ ಶಿವಕುಮಾರ್ ಈ ದಿನ.ಕಾಮ್ ದೊಂದಿಗೆ ಮಾತನಾಡಿ, “ಕಾರ್ಖಾನೆ ವಾಸನೆಯಿಂದ ಹೊಸ ಶಾಲೆ ಬಿಟ್ಟು ಹಳೆ ಶಾಲೆಯ ಕಟ್ಟಡದಲ್ಲಿ ತರಗತಿ ನಡೆಸುತ್ತಿದ್ದಾರೆ. ಇಲ್ಲಿ ಬರಿ ನಾಲ್ಕು ಕೋಣೆಗಳು ಇದ್ದು ಮಳೆಗಾಲದಲ್ಲಿ ಪೂರ್ತಿ ಸೋರುತ್ತವೆ. ಕೋಣೆಗಳು ಹಸಿಯಾಗುತ್ತವೆ. ನಾವೆಲ್ಲಾ ಗೋಣಿ ಚೀಲ ಹಾಸಿಕೊಂಡು, ಅದರಲ್ಲೇ ಕುಳಿತು ಪಾಠ ಕೇಳುತ್ತಿದ್ದೇವೆ. ಎರಡು ತರಗತಿಗಳು ಸೇರಿಸಿ, ಒಂದೇ ಕೋಣೆಯಲ್ಲಿ ಪಾಠ ಮಾಡುತ್ತಿರುವುದರಿಂದ ನಮಗೆ ಸರಿಯಾಗಿ ಕಲಿಯಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆ ಬಗ್ಗೆ ಹರಿಯಬೇಕು” ಎಂದು ಕೇಳಿಕೊಂಡರು.
ಇನ್ನು ಈ ಬೆಳವಣಿಗೆಯ ಬಗ್ಗೆ ಲುಂಬಿನಿ ರೇಷ್ಮೆ ಕಾರ್ಖಾನೆ ಮಾಲೀಕರಾದ ರೇಷ್ಮಾ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರೇಷ್ಮೆ ಕಾರ್ಖಾನೆಗಳಿಂದ ಯಾವುದೇ ವಾಸನೆ ಬಿಡುಗಡೆ ಆಗುವುದಿಲ್ಲ. ನಮ್ಮ ಕಾರ್ಖಾನೆಯಲ್ಲಿ ಬಳಸುವ ಕಚ್ಚಾ ವಸ್ತುಗಳು ಎಲ್ಲ ಪ್ರೊಟೀನ್ ಅಂಶಗಳನ್ನು ಹೊಂದಿರುವಂಥವು. ಸಿಲ್ಕ್ ಪ್ರೊಡಕ್ಷನ್‌ನಿಂದ ಯಾವುದೇ ತೊಂದರೆ ಆಗುವುದಿಲ್ಲ” ಎಂದು ಸಮಜಾಯಿಷಿ ನೀಡಿದರು.
“ನಮ್ಮ ಭಾಗದ ರೈತರ ಅಭಿವೃದ್ಧಿಗಾಗಿ ಸಿಲ್ಕ್ ಪ್ರೊಡಕ್ಷನ್ ಆಗಬೇಕು ಅನ್ನುವ ಸದ್ದುದೇಶದಿಂದ ನಾವು ರೇಷ್ಮೆ ಕಾರ್ಖಾನೆ ಪ್ರಾರಂಭ ಮಾಡಿದ್ದೇವೆ. ರೇಷ್ಮೆ ತಯಾರಿಸಲು ಬಿಸಿ ನೀರು ಬಳಸಿ ಕೆಲಸ ಮಾಡುತ್ತೇವೆ. ವೇಸ್ಟೇಜ್ ಯಾವುದೂ ಬಿಡುಗಡೆ ಆಗುವುದಿಲ್ಲ” ಎಂದು ತಿಳಿಸಿದ್ದಾರೆ.
ಹಾಲಿನ ಕಾರ್ಖಾನೆ ಪ್ರಾರಂಭಿಸುತ್ತಿರುವುದಾಗಿ ಮಾಹಿತಿ!
ಈ ಬೆಳವಣಿಗೆಯ ಬಗ್ಗೆ ಸ್ಥಳೀಯರನ್ನು ಮಾತನಾಡಿಸಿದಾಗ, “ಇದು ರೇಷ್ಮೆ ಕಾರ್ಖಾನೆ ಅಂತ ಹೇಳಿ ಪ್ರಾರಂಭಿಸಿಲ್ಲ. ಮೊದಲಿಗೆ ಹಾಲಿನ ಕಾರ್ಖಾನೆ ಪ್ರಾರಂಭಿಸುತ್ತಿರುವುದಾಗಿ ಮಾಹಿತಿ ಇದ್ದಿದ್ದರಿಂದ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ರೇಷ್ಮೆ ಕಾರ್ಖಾನೆ ಆಗಿ ಒಂದು ವರ್ಷ ಆಗುತ್ತಾ ಬಂದಿದೆ. ವಾಸನೆಯಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ವಾಸನೆ ಇಲ್ಲದಂತೆ ಮಾಡಲು ಯಂತ್ರ ತರಿಸುವುದಾಗಿ ಕಾರ್ಖಾನೆಯವರು ಹೇಳಿದ್ದಾರೆ. ಈವರೆಗೆ ಅಂತಹ ಯಾವುದೂ ಅವರು ಮಾಡಿಲ್ಲ. ಗ್ರಾಮ ಸಭೆಯಲ್ಲಿ ಈ ವಿಚಾರದ ಕುರಿತು ಚರ್ಚೆ ಮಾಡಲಾಗಿದೆ. ಆದರೂ ಪರಿಹಾರ ಸಿಕ್ಕಿಲ್ಲ, ಮಕ್ಕಳು ಹೊಸ ಕಟ್ಟಡದಲ್ಲಿ ಕುಳಿತು ಪಾಠ ಕೇಳುವಂತಾಗಲಿ” ಎಂದು ತಿಳಿಸಿದರು.
ಈ ಸಮಸ್ಯೆಯು ಸೌಹಾರ್ದಯುತವಾಗಿ ಬಗೆಹರಿಯಲಿ ಹಾಗೂ ಮಕ್ಕಳು ಹೊಸ ಕಟ್ಟಡದಲ್ಲಿ ಕುಳಿತು ಪಾಠ ಕೇಳುವಂತಾಗಲಿ ಎಂಬುದು ನಮ್ಮ ಹಾರೈಕೆ. ಈ ಸಂಬಂಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.