ನೂತನ ಬಡಾವಣೆಗೆ ವಿದ್ಯುತ್ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಇಇ ಮತ್ತು ಎಸ್‌ಒ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅವಲಹಳ್ಳಿ ಬೆಸ್ಕಾಂ ಎಇಇ ರಮೇಶ್ ಬಾಬು ಮತ್ತು ಎಸ್ ಒ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಗಳು.
ಬೆಂ.ಗ್ರಾಮಾಂತರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ. 101/33, 149 ಜಮೀನಿನಲ್ಲಿ ನಿರ್ಮಾಣ ಮಾಡಿರುವ ಪಿ.ಮುತ್ತುಸ್ವಾಮಿ ಎಂಬುವರ ಬಡಾವಣೆಗೆ ವಿದ್ಯುತ್ ಸಂಪರ್ಕ ನೀಡಲು ಶ್ರೀ ಚಕ್ರ ಎಲೆಕ್ಟಿಕಲ್‌ನ ಸೀನಿಯರ್ ಮ್ಯಾನೇಜರ್ ವಿಜಯಕುಮಾರ್ ಎಂಬುವರ ಬಳಿ ಅವಲಹಳ್ಳಿ ಬೆಸ್ಕಾಂ ಎಇಇ ರಮೇಶ್ ಬಾಬು ಅವರು ಸೆಕ್ಷನ್ ಆಫೀಸರ್ ನಾಗೇಶ್ ಮೂಲಕ 16.50ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಕುರಿತು ವಿಜಯಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆ ಗುರುವಾರ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬೊಮ್ಮೇನಹಳ್ಳಿಯ ನ್ಯೂ ರಾಯಲ್ ಪ್ರೆಷ್ ಮಾರ್ಟ್ ಬಳಿ ಎಸ್‌ಒ ನಾಗೇಶ್ ಲಂಚವನ್ನು ಪಡೆಯುವಾಗ ಹಣದ ಸಮೇತ ಬಂಧಿಸಿದ್ದಾರೆ. ಲಂಚ ನೀಡುವಂತೆ ತಿಳಿಸಿದ್ದ ಎಇಇ ರಮೇಶ್ ಬಾಬು ಅವರನ್ನೂ ಸಹ ದಸ್ತಗಿರಿ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಅಧೀಕ್ಷಕ ಪವನ್ ನೆಟ್ಟೂರ್ ಮಾರ್ಗದರ್ಶನದಂತೆ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ವರ್ಗದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.