‘ಕರ್ನಾಟಕ ಸುವರ್ಣ ಸಂಭ್ರಮ’ದ ಅಂಗವಾಗಿ ಕನ್ನಡ ಸ್ನೇಹಸಿರಿ ಬಳಗ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ “ಕರ್ನಾಟಕದ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಮಹಿಳೆಯರ ಪಾತ್ರ” ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ ಕೋರನ ಸರಸ್ವತಿ ಮಾತನಾಡಿ, “ಇತಿಹಾಸದಲ್ಲಿ ಮಹಿಳೆಯರ ಸಾಧನೆಗಳನ್ನು ದಾಖಲಿಸುವಲ್ಲಿ ತಾತ್ಸಾರ ತೋರಿದ ಪರಿಣಾಮ ಅಂದಿನ ಸಾಧಕಿಯರ ಬಗ್ಗೆ ಇಂದು ಮಾಹಿತಿ ದೊರೆಯುತ್ತಿಲ್ಲ. ಅಂತಹ ಮಹಿಳೆಯರನ್ನು ಸದಾ ಸ್ಮರಿಸುವ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ” ಎಂದರು.
ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದಲ್ಲಿ ಜಿಲ್ಲೆಯಾದ್ಯಂತ ಕನ್ನಡ ಸ್ನೇಹಸಿರಿ ಬಳಗ ಐವತ್ತು ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದ್ದು ಇಂದು ಮೂವತ್ತೊಂಬತ್ತನೇ ಕಾರ್ಯಕ್ರಮ ನಡೆಸುತ್ತಿದ್ದು, ಸಹಕರಿಸಿದ ಎಲ್ಲಾ ಕನ್ನಡಿಗರಿಗೆ ಆಭಾರಿಯಾಗಿದ್ದೇವೆ. ಕೊಡಗಿನ ಕವಯಿತ್ರಿ , ಬರಹಗಾರ್ತಿ ಕೊಡಗಿನ ಗೌರಮ್ಮ ಮಹಾತ್ಮ ಗಾಂಧಿಯವರಿಗೆ ತನ್ನೆಲ್ಲಾ ಒಡವೆಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿ ಸಹಕರಿಸಿದ್ದನ್ನು ಸ್ಮರಿಸಿದರು.
ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ದಯಾನಂದ ಕೆ ಸಿ ಮಾತನಾಡಿ, ಅಂದಿನ ಕಾಲದಲ್ಲಿ ಕರ್ನಾಟಕದ ನೂರಾರು ಮಹಿಳೆಯರು ತಮ್ಮ ವೈಯುಕ್ತಿಕ ಬದುಕನ್ನು ಬದಿಗಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದನ್ನು ವಿವರಿಸಿದರು. ಕುಂದಾಪುರದ ಉಮಾಬಾಯಿ, ಬಳ್ಳಾರಿಯ ರುದ್ರಮ್ಮ, ನಾಗಮ್ಮ ಪಾಟೀಲ, ಶಕುಂತಲಾ ಕುರ್ತಕೋಟಿ, ಯಶೋಧರ ದಾಸಪ್ಪ, ಟಿ ಸುನಂದಮ್ಮ, ಸರೋಜಿನಿ ಮಹಿಷಿ ಮುಂತಾದ ಕನ್ನಡದ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಸಾಧನೆಯನ್ನು ಸ್ಮರಿಸಿದರು.
ಇದನ್ನು ಓದಿದ್ದೀರಾ? ರೇಣುಕಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ಹೈಕೋರ್ಟ್ ಮಧ್ಯಂತರ ಜಾಮೀನು
ಶಕ್ತಿದಿನ ಪತ್ರಿಕೆಯ ಉಪ ಸಂಪಾದಕ ಕುಡೇಕಲ್ ಸಂತೋಷ್,ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಸಂಚಾಲಕ ತೆನ್ನಿರ ಮೈನಾ, ಕಾಲೇಜಿನ ಪ್ರಾಚಾರ್ಯ ಪ್ರೊ ಸತೀಶ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ನಿರ್ಮಲ, ವಿಧ್ಯಾರ್ಥಿನಿಯರಾದ ಪ್ರೀಯ,ವಿದ್ಯಾಶ್ರೀ ಸೇರಿದಂತೆ ಹಲವರು ಇದ್ದರು.
