2014ರ ಸಾರ್ವತ್ರಿಕ ಚುನಾವಣೆ ವೇಳೆ ಬಿಜೆಪಿಗರು ಉತ್ಪಾದನೆ ಖರ್ಚಿಗಿಂತ 50% ಹೆಚ್ಚು ಅದಾಯ ಬರುವಂತೆ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಆದರೆ, ಈಗ ಉಲ್ಟಾ ಹೊಡೆಯುತ್ತಿದ್ದಾರೆ. ರೈತ, ದಲಿತ, ಕಾರ್ಮಿಕ, ಯುವಜನ ವಿರೋಧಿ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ರೈತ ಹೋರಾಟಗಾರ ಡಾ. ವಿಜು ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಧರಣಿಯಲ್ಲಿ ಅವರು ಮಾತನಾಡಿದರು. “2014ರಲ್ಲಿ ಚುನಾವಣೆ ಬಂದಾಗ ಹಲವಾರು ಭರವಸೆಗಳನ್ನು ಬಿಜೆಪಿ ನೀಡಿತ್ತು. ಆ ಮೂಲಕ ಅಧಿಕಾರಕ್ಕೆ ಬಂದಿತು. ರೈತರು, ಯುವಜನರು ಹಾಘೂ ಮಹಿಳೆಯರಿಗೆ ‘ಅಚ್ಛೇ ದಿನ್’ ಬರುತ್ತದೆ ಎಂದಿದ್ದರು. ಆದರೆ, ಯಾರಿಗೆ ಅಚ್ಛೇ ದಿನ್ ಬಂದಿದೆ. ರೈತರು, ಯುವಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಕಿಡಿಕಾರಿದರು.
“ಉತ್ಪಾದನೆ ಖರ್ಚಿಗಿಂತ 50% ಹೆಚ್ಚು ಅದಾಯ ಬರುವಂತೆ ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದರು. ಆದರೆ, ಈಗ ಕೃಷಿ ಮಂತ್ರಿಯನ್ನ ಕೇಳಿದರೆ, ‘ಚುನಾವಣಾ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಭರವಸೆ ನೀಡುತ್ತವೆ. ಅದೆಲ್ಲವನ್ನೂ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ’ ಎಂದು ಈಗ ಅವರು ಹೇಳುತ್ತಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಳ್ಳುವ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದರು. ಅದರ ವಿರುದ್ಧ ದಲಿತ, ಕಾರ್ಮಿಕರ, ರೈತರು ಐಕ್ಯ ಹೋರಾಟ ನಡೆಸಿದರು. ಹೀಗಾಗಿ, ಸಂಸತ್ತಿನಲ್ಲಿ ಆ ಮಸೂದೆಯನ್ನು ಹಿಂಪಡೆದುಕೊಂಡರು” ಎಂದು ತಿಳಿಸಿದರು.
“ಕೊರೊನಾ ಸಮಯದಲ್ಲಿ ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದರು. ಅವುಗಳ ವಿರುದ್ಧ ಸಾಂಕ್ರಾಮಿಕ ರೋಗಕ್ಕೂ ಹೆದರದೆ, ರೈತರು ಹೋರಾಟ ನಡೆಸಿದರು. ಸಂಯುಕ್ತ ಕಿಸಾನ್ ಮೂರ್ಚಾ, ‘ಗ್ರಾಮೀಣ್ ಭಾರತ್ ಬಂದ್’ಗೆ ಕರೆಕೊಟ್ಟು, ದೆಹಲಿ ಗಡಿಯಲ್ಲಿ ಒಂದು ವರ್ಷದ ಕಾಲ ಹೋರಾಟ ನಡೆಸಿದರು. ಆ ಹೋರಾಟ ಗೆದ್ದಿತು. ಅದಕ್ಕೆ ಕಾರಣ, ಎಲ್ಲರ ಐಕ್ಯತೆ. ಈ ಐಕ್ಯತೆಯನ್ನ ಎಲ್ಲರೂ ಮುಂದೆ ಕೊಂಡೊಯ್ಯಬೇಕು” ಎಂದರು.
“ನರಗುಂದ, ನವಲಗುಂದ ರೈತ ಹುತಾತ್ಮರ ಭೂಮಿ. ರಾಜ್ಯದ ರೈತರು, ದಲಿತರು, ಆದಿವಾಸಿಗಳು ಹೋರಾಟದ ಐಕ್ಯತೆಯಲ್ಲಿ ಇಡೀ ದೇಶದಲ್ಲೇ ಎರಡು ಹೆಜ್ಜೆ ಮುಂದಿದ್ದಾರೆ. ಎಲ್ಲೆಡೆ, ಇನ್ನೂ ಎಲ್ಲರನ್ನೂ ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಇಲ್ಲಿ, ಎಲ್ಲರೂ ಒಗ್ಗೂಡಿ ಹೋರಾಟ ನಡೆಸುತ್ತಿದ್ದಾರೆ” ಎಂದರು.
“ಪ್ರಸ್ತುತ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ, ಮೋದಿ ಅವರ ಹೆಸರಿನಲ್ಲಿ ಭರವಸೆ ನೀಡಲಾಗುತ್ತಿದೆ. ಅವರು ರಾಜಸ್ಥಾನದಲ್ಲಿ 450 ರೂ.ಗೆ ಅಡುಗೆ ಅನಿಲ ನೀಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ 380 ರೂ. ಇದ್ದ ಸಿಲಿಂಡರ್ ಬೆಲೆ, ಈಗ 1250 ರೂ. ದಾಟಿದೆ. ಈಗ ಅವರು ಸುಳ್ಳು ಭರವಸೆಗಳನ್ನ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
“ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಹೇಳುತ್ತಿದ್ದಾರೆ – ಕಾರ್ಮಿಕರು 72 ಗಂಟೆ ಕೆಲಸ ಮಾಡಬೇಕು ಅಂತ. ಆ ನೀತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ, ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡ ಆ ನೀತಿಯನ್ನು ಹಿಂಪಡೆದುಕೊಂಡಿಲ್ಲ. ತಮಿಳುನಾಡಿನಲ್ಲಿ ಈ ನೀತಿಯ ವಿರುದ್ಧ ಹೋರಾಟಗಳು ನಡೆದವು. ಅಲ್ಲಿನ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಹಿಂಪಡೆದುಕೊಂಡಿತು. ಆದರೆ, ರಾಜ್ಯದಲ್ಲಿ ಇನ್ನೂ ಆ ನೀತಿ ಹಾಗೆಯೇ ಉಳಿದಿದೆ” ಎಂದರು.