ಮಂಡ್ಯ ಜಿಲ್ಲಾ ಶ್ರಮಿಕ ನಗರ (ಸ್ಲಂಗಳು)ಗಳ ತೊಡಕುಗಳನ್ನು ನೀಡಿರುವ 15 ದಿನಗಳ ಗಡುವಿನೊಳಗೆ ನಿವಾರಣೆ ಮಾಡಬೇಕು. ಈ ಆದೇಶವನ್ನು ಪಾಲನೆ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ಅವರು ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದರು.
ಮಂಡ್ಯ ನಗರದ ಶ್ರಮಿಕ(ಸ್ಲಂ) ನಗರಗಳ ಸಮಸ್ಯೆಗಳ ಕುರಿತು ಸಭೆ ನಡೆಸಿ ಅವರು, ಹಲವು ಶ್ರಮಿಕ ನಗರಗಳ ವಿಚಾರವಾಗಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದೆ ಮಾಡಬೇಕಾದ ಕೆಲಸಗಳ ಬಗ್ಗೆ ಆದೇಶಿಸಿದರು.
“ಅಧಿಕಾರಿಗಳು ಬೇಜವಾಬ್ದಾರಿತನ ಬಿಟ್ಟು ನಿಗದಿತ ಅವಧಿಯೊಳಗೆ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು” ಎಂದು ಕಿಡಿಕಾರಿದರು.
ಕಾಳಿಕಾಂಬ ವಿಚಾರವನ್ನು ಚರ್ಚಿಸಿ ಸರ್ವೆ ನಂಬರ್ 845ರಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿ ಸಮುದಾಯ ಭವನ ನಿರ್ಮಾಣ ಮಾಡಿಕೊಂಡಿರುವ ಕಾಳಿಕಾಂಬ ಕಮಿಟಿಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು. ಸರ್ವೆ ನಂಬರ್ 843, 844ರಲ್ಲಿ ಇರುವ ವ್ಯಾಜ್ಯದ ಬಗ್ಗೆ ವಕೀಲರ ಬಳಿ ಮಾತನಾಡಿ ಬೇಗ ಆದೇಶ ಮಾಡಿಸಲು ಸ್ಲಂಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು. ಮಂಡ್ಯ ಶಾಸಕರ ಬಳಿ ಈ ವಿಚಾರವಾಗಿ ಚರ್ಚಿಸುತ್ತೇನೆಂದು ಹೇಳಿದರು.
ಕಾಳಪ್ಪ ಬಡಾವಣೆ ನಿವಾಸಿಗಳಿಗೆ ಶೀಘ್ರದಲ್ಲೇ ಹಕ್ಕುಪತ್ರ ವಿತರಿಸಲಾಗುವುದು. ಶಾಸಕರ ಜೊತೆಗೆ ಚರ್ಚಿಸಿ ಸಮಯವನ್ನು ನಿಗದಿಪಡಿಸಲಾಗುವುದು. ಆರ್‌ಟಿಓ ನಿವಾಸಿಗಳು ಇರುವ ಸರ್ಕಾರಿ ಖರಾಬ್ ಜಾಗವನ್ನು ಪರಿಶೀಲಿಸಿ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಮತ್ತು ಎಸಿಗೆ ಆದೇಶ ಮಾಡಿದರು.
“ಹೊಸಹಳ್ಳಿ ಗುರುಮಠ ಸ್ಲಂ ಇರುವ ಜಾಗ ಸರ್ಕಾರಿ ಕಟ್ಟೆ ಎಂದು ನಮೂದು ಆಗಿರುವುದನ್ನು ರದ್ದುಪಡಿಸಲು, ಮರು ಘೊಷಣೆಗೆ ಪ್ರಸ್ತಾವನೆಯನ್ನು ಮತ್ತೆ ಸರ್ಕಾರಕ್ಕೆ ಕಳಿಸುತ್ತೇವೆ. ಸಂಘಟನೆಯಿಂದಲೂ ಕೂಡ ಫಾಲೋ ಅಪ್ ಮಾಡಿ” ಎಂದು ಕೇಳಿಕೊಂಡರು.
ನ್ಯೂ ತಮಿಳು ಕಾಲೋನಿ ವಿಷಯವಾಗಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆದ ನಂತರ ಖಾತೆ ಮಾಡುತ್ತೇವೆ ಎಂದ ಆಯುಕ್ತರಿಗೆ ಘೋಷಣೆಯಾಗಿ, “ಪರಿಚಯಪತ್ರ ಹಾಗೂ ಹಕ್ಕುಪತ್ರ ಕೊಟ್ಟ ಮೇಲೆ ಮತ್ಯಾಕೆ ಕಮಿಟಿ ಮುಂದೆ ಇಡಬೇಕು. ಕೂಡಲೇ ಖಾತೆ ಮಾಡಲು ಬೇಕಾದ ತಯಾರಿ ಮಾಡಿಕೊಂಡು ಕೆಲಸ ಮುಗಿಸಿ. ಇಲ್ಲವಾದರೆ ಕ್ರಮ ಜರುಗಿಸಲಾಗುದು” ಎಂದು ತರಾಟೆಗೆ ತೆಗೆದುಕೊಂಡರು.
“ಗಾಡಿ ಕಾರ್ಖಾನೆ ಶ್ರಮಿಕ ನಗರದಲ್ಲಿ ಉಳಿದಿರುವ 8 ನಿವೇಶನಗಳು. ಸ್ಲಾಟರ್ ಹೌಸ್‌ನ 5 ಕುಟುಂಬಗಳಿಗೆ ಸೇರಿದಂತೆ ಸ್ಲಂಬೋರ್ಡ್ ಕೇಂದ್ರ ಕಚೇರಿಗೆ ಒಪ್ಪಿಗೆಗಾಗಿ ಕಳಿಸಿ. ನಾನು ಮಂಜೂರು ಮಾಡುತ್ತೇನೆ. ಎಲ್ಲ ನಿವೇಶನಗಳು ಹಂಚಿಕೆಯಾದ ತಕ್ಷಣ ಖಾತೆ ಮಾಡಲು ನಗರಸಭೆಗೆ ಹಸ್ತಾಂತರ ಮಾಡಬೇಕು” ಎಂದು ಸೂಚನೆ ನೀಡಿದರು.
“ಹೊನ್ನಯ್ಯ ಬಡಾವಣೆಗೆ ಖಾತೆ ಮಾಡಲಾಗುತ್ತಿದೆ. ಪ್ರತ್ಯೇಕವಾಗಿ ಶೌಚಾಲಯ ಇಲ್ಲದ ಮನೆಗಳನ್ನು ಗುರುತಿಸಲಾಗಿದೆ. ಅವರಿಗೆ
ಒಳಚರಂಡಿ ಏರ್ಪಾಪಾಡು ಮಾಡಿಸಲು ಹಿಂದಿನ ಸಭೆಯಲ್ಲಿ ಗಮನಕ್ಕೆ ತರಲಾಗಿತ್ತು. ಅದರ ಕಾಮಗಾರಿಗೆ ₹25 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಒಂದು ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಮಾಡಿ ಕಾಮಗಾರಿಯನ್ನು ಮುಗಿಸಿ ಕೊಡುತ್ತೇವೆ” ಎಂದು ನಗರಸಭೆ ಆಯುಕ್ತರು ಸಭೆಗೆ ತಿಳಿಸಿದರು.

“ಮಂಡ್ಯದ ಕೆಲವು ಶ್ರಮಿಕ ನಗರಗಳಲ್ಲಿ ಹೆಚ್ಚುವರಿ ಕುಟುಂಬಗಳಿಗೆ 5 ಎಕರೆ ಜಾಗವನ್ನು ಕಾಯ್ದಿರಿಸಲು ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗೆ ಸೂಚನೆ ನೀಡಿದರು. ವಿಎ ಮತ್ತು ಆರ್‌ಐಗಳನ್ನು ಕರೆದು ಸಭೆ ಮಾಡಿ ಸರ್ಕಾರಿ ಜಾಗಗಳ ಬಗ್ಗೆ ಮಾಹಿತಿ ಪಡೆದು ಮೀಸಲು ಇಡುತ್ತೇವೆ” ಎಂದು ತಹಶೀಲ್ದಾರ್ ಸಭೆಗೆ ತಿಳಿಸಿದರು.
“ಮದ್ದೂರು ತಮಿಳು ಕಾಲೋನಿಯ ನಿವಾಸಿಗಳಿಗೆ ನಿವೇಶನ ಹಂಚಿಕೆ ಮಾಡಲು ಜಾಗದ ಅಭಿವೃದ್ಧಿ ಮಾಡಬೇಕಿದೆ. ಅದಕ್ಕಾಗಿ ₹8 ಕೋಟಿ ಅನುದಾನ ಮಂಜೂರು ಮಾಡಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ತಿಂಗಳ ಒಳಗಾಗಿ ನಿವೇಶನ ಹಂಚಿಕೆ ಮಾಡುತ್ತೇವೆ” ಎಂದು ಸ್ಲಂಬೋರ್ಡ್ ಎಇಇ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರೇ ಮುಂದುವರೆಯುತ್ತಾರೆ: ಆರ್ ವಿ ದೇಶಪಾಂಡೆ
“ಒಟ್ಟಾರೆ ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಬಹಳಷ್ಟು ಅಧಿಕಾರಿಗಳ ನಿರ್ಲ್ಯಕ್ಷ್ಯವನ್ನು ಕಟುವಾಗಿ ಖಂಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಡಬೇಕಾದ ಕೆಲಸಗಳಿಗೆ 15 ದಿನಗಳ ಗಡುವು ಕೊಟ್ಟಿದ್ದು ಮತ್ತು ಕೆಲಸಗಳು ಹಾಗದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮಹಿಳಾ ಮುನ್ನಡೆಯ ಪೂರ್ಣಿಮಾ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಎಲ್ಲ ಶ್ರಮಿಕ ನಗರಗಳ ಪದಾಧಿಕಾರಿಗಳಾದ ನಿಂಗಮ್ಮ, ರತ್ನ, ಲತಾ, ರಾಜು ಶಿವಲಿಂಗಣ್ಣ, ವೈದುನಾ, ರವಿ, ಮಾದೇವಣ್ಣ, ಲತಾ, ಗಾಯತ್ರಿ, ನಾಗೇಶ್, ಹರೀಶ್ ಕುಮಾರ್ ಇದ್ದರು.