‘ಬೆಂಬಲ ಬೆಲೆ ಯೋಜನೆ’ಯಡಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿಗೆ ಸಿದ್ಧತೆ ನಡೆಸಲಾಗುತ್ತಿದ್ದು, ಮಂಡ್ಯ ಜಿಲ್ಲೆಯಾದ್ಯಂತ 32 ಖರೀದಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ರೈತರು ನವೆಂಬರ್ 15ರಿಂದ ಹೆಸರು ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಮಂಡ್ಯ ತಾಲೂಕಿನಲ್ಲಿ 6 ಖರೀದಿ ಕೇಂದ್ರ, ಮದ್ದೂರು 6, ಮಳವಳ್ಳಿ 4, ಕೆ ಆರ್ ಪೇಟೆ 6, ಪಾಂಡವಪುರ 4, ಶ್ರೀರಂಗಪಟ್ಟಣ 4 ಹಾಗೂ ನಾಗಮಂಗಲ ತಾಲೂಕಿನಲ್ಲಿ 2 ಖರೀದಿ ಕೇಂದ್ರ ಸೇರಿದಂತೆ ಒಟ್ಟು 32 ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ಇಚ್ಛಿಸುವವರು ನವೆಂಬರ್ 15ರಿಂದ ಅಗತ್ಯ ದಾಖಲೆ ಸಲ್ಲಿಸಿ ಹೆಸರು ನೋಂದಣಿ ಮಾಡಿಸಬೇಕು” ಎಂದರು.
“ಮುಂಗಾರು ಹಂಗಾಮಿನ ಭತ್ತ ಕಟಾವು ಅವಧಿಗೆ ಸರಿಯಾಗಿ ಖರೀದಿ ಕೇಂದ್ರಗಳು ಸ್ಥಾಪನೆಯಾಗಬೇಕು. ಬೆಂಬಲ ಬೆಲೆ ಯೋಜನೆ ಸಮರ್ಪಕವಾಗಿ ರೈತರಿಗೆ ತಲುಪಬೇಕು. ಖರೀದಿ ಕೇಂದ್ರಗಳಿಗೆ ಬಂದ ರೈತರಿಗೆ ಅವಶ್ಯವಿರುವ ಎಲ್ಲ ಮೂಲ ಸೌಲಭ್ಯ ಒದಗಿಸಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ನೀರು, ನೆರಳು ಸೇರಿದಂತೆ ಹಲವು ಸೌಲಭ್ಯ ನೀಡಬೇಕು. ಕೇಂದ್ರಕ್ಕೆ ಬರುವ ರೈತರೊಂದಿಗೆ ಸಿಬ್ಬಂದಿ ಸೌಜನ್ಯಯುತವಾಗಿ ವರ್ತಿಸಬೇಕು” ಎಂದು ಸೂಚಿಸಿದರು.
“ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡಲು ಫ್ರೂಟ್ ಐಡಿ ಹಾಗೂ ಆಧಾರ್ ಕಾರ್ಡ್ ಜೋಡಣೆ ಆಗಿರಬೇಕು. ಜೋಡಣೆ ಆಗದ ರೈತರು ಕೂಡಲೇ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಐಡಿ ಜೋಡಣೆ ಮಾಡಿಸಬೇಕು. ಎನ್‌ಪಿಸಿಐ ಆ್ಯಕ್ಟೀವ್ ಇರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿ ಹಾಜರುಪಡಿಸಿ ಹೆಸರು ನೋಂದಣಿ ಮಾಡಿಕೊಳ್ಳಬೇಕು” ಎಂದು ತಿಳಿಸಿದರು.
ಡಿ.1ರಿಂದ ಭತ್ತ ಖರೀದಿ: “ಹೆಸರು ನೋಂದಣಿ ಮಾಡಿಕೊಂಡ ರೈತರಿಂದ ಡಿಸೆಂಬರ್ 1 ರಿಂದ 2024ರ ಮಾರ್ಚ್ 31ರವರೆಗೆ ಭತ್ತ ಖರೀದಿ ಮಾಡಲಾಗುವುದು. ಸಾಮಾನ್ಯ ಗುಣಮಟ್ಟದ ಭತ್ತ ಪ್ರತಿ ಕ್ವಿಂಟಲ್‌ಗೆ ₹ 2,183, ಉತ್ತಮ ಗುಣಮಟ್ಟದ ಎ ಗ್ರೇಡ್ ಭತ್ತ ಕ್ವಿಂಟಲ್‌ಗೆ ₹ 2,203ರಂತೆ ನಿಗದಿ ಮಾಡಲಾಗಿದೆ. ಪ್ರತಿ ಎಕರೆಗೆ ಕನಿಷ್ಠ 25 ಕ್ವಿಂಟಲ್ ಗರಿಷ್ಠ 40 ಕ್ವಿಂಟಾಲ್ ಖರೀದಿ ಮಾಡಲಾಗುವುದು” ಎಂದರು.
“ಭತ್ತದ ಗುಣಮಟ್ಟ ಪರಿಶೀಲಿಸಲು ಅವಶ್ಯವಿರುವ ಗ್ರೇಡರ್‌ಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಬೇಕು. ರೈತರು ತರುವ ಭತ್ತವನ್ನು ಪಾರದರ್ಶಕವಾಗಿ ಪರಿಶೀಲನೆ ನಡೆಸಿ ಗ್ರೇಡಿಂಗ್ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಬರ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಕೋಟ ಶ್ರೀನಿವಾಸ ಪೂಜಾರಿ
ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್ ಮಾತನಾಡಿ “ಕಳೆದ ಸಾಲಿನಲ್ಲಿ 17,642 ಮಂದಿ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದರು. 3,068 ಮಂದಿ ರೈತರಿಂದ 80,617 ಕ್ವಿಂಟಲ್ ಭತ್ತ ಖರೀದಿ ಮಾಡಲಾಗಿತ್ತು. ಜಿಲ್ಲೆಯಲ್ಲಿ 7.45 ಲಕ್ಷ ಕ್ವಿಂಟಲ್ ಭತ್ತ ದಾಸ್ತಾನು ಸಾಮರ್ಥ್ಯದ 9 ಗೋದಾಮುಗಳಿವೆ” ಎಂದು ಮಾಹಿತಿ ನೀಡಿದರು.
ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೆಶಕ ವಿ ಎಸ್ ಅಶೋಕ್, ಎಪಿಎಂಸಿ ಉಪನಿರ್ದೇಶಕ ಶ್ರೀನಿವಾಸ್ ಇದ್ದರು.