ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹೇಮಗಿರಿ ಬಿಜಿಎಸ್ ಶಾಖಾ ಮಠದಲ್ಲಿ ʼಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿʼಯವರ 51ನೇ ಪಟ್ಟಾಭಿಷೇಕ ಮಹೋತ್ಸವ ನಡೆಯಿತು.
ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ ಐವತ್ತೊಂದು ಹಿರಿಯ ಆದರ್ಶ ಜೋಡಿಗಳಿಗೆ ಮಠದ ಪ್ರಧಾನ ಕಾರ್ಯದರ್ಶಿ ಡಾ ಜೆ ಎನ್ ರಾಮಕೃಷ್ಣೇಗೌಡ ನೇತೃತ್ವದಲ್ಲಿ ವಿಶೇಷ ಪೂಜೆ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಶಾಸಕ ಹೆಚ್ ಟಿ ಮಂಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಶ್ರೀಗಳು ನಾಡು ಕಂಡ ಅಪ್ರತಿಮ ಕಾಯಕ ಯೋಗಿ, ಸಂತ ಶ್ರೇಷ್ಠರ 51ನೇ ವರ್ಷದ ಪಟ್ಟಾಭಿಷೇಕದ ಸುಸಂದರ್ಭದಲ್ಲಿ ಸ್ಮರಿಸುವುದು ನಮ್ಮೆಲ್ಲರ ಪುಣ್ಯ. ಕುವೆಂಪು ಅವರಂತೆ ವಿಶ್ವಮಾನವ ಪರಿಕಲ್ಪನೆಯನ್ನು, ಬಸವಣ್ಣನವರಂತೆ ಸರ್ವರಿಗೂ ಸಮಬಾಳು ಎಂಬಂತೆ ಸಮಾಜದ ಏಳಿಗೆಗೆ ದುಡಿದವರು ಶ್ರೀಗಳು” ಎಂದು ಸ್ಮರಿಸಿದರು.
“ಶ್ರೀಗಳು ಸಮಾಜದ ಸುಧಾರಕರಾಗಿ, ಜಾತಿ ಧರ್ಮ ಭೇದ ಮರೆತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ನೀಡಿ, ಅನ್ನದಾಸೋಹದ ಮೂಲಕ ಬದುಕು ಕಟ್ಟಿಕೊಟ್ಟವರು. ಸಮಾಜದಲ್ಲಿ ಬದುಕುವ ರೀತಿ ಮತ್ತು ಸಮಾಜ ಸುಧಾರಣೆಗೆ ಹಲವಾರು ಮೌಲ್ಯಯುತ ಸಲಹೆ ಮತ್ತು ಸಹಕಾರವನ್ನು ಶ್ರೀ ಮಠದ ಮೂಲಕ ಮಾಡಿದ್ದಾರೆ” ಎಂದು ಹೇಳಿದರು.
ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ ಜೆ ಎನ್ ರಾಮಕೃಷ್ಣೇಗೌಡ ಮಾತನಾಡಿ, “ಶ್ರೀಗಳ 51ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಶ್ರೀಗಳ ಆದರ್ಶಗಳನ್ನು ಮೈಗೂಡಿಸಿಕೊಂಡು, ಶ್ರೀಗಳ ಆಶೀರ್ವಾದದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ವಿನೂತನವಾಗಿ 51 ಜೋಡಿ ಹಿರಿಯ ಆದರ್ಶ ದಂಪತಿಗಳಿಗೆ ಅಭಿನಂದನೆ ಸಮಾರಂಭ ಆಯೋಜಿಸಿದ್ದೇವೆ. ಯುವಸಮುದಾಯಕ್ಕೆ ಮಾದರಿಯಾಗಿರುವ ದಂಪತಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ” ಎಂದರು.
ಕೆ ಆರ್ ನಗರ ಕಾಗಿನಲೆ ಮಹಾಸಾನಸ್ಥಾನ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದಪುರಿ, ಕಾಪನಹಳ್ಳಿ ಗವಿಮಠ ಪೀಠಾಧ್ಯಕ್ಷ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಅಧ್ಯಕ್ಷ ಶ್ರೀ ಗಂಗಾಧರ್ ಶಿವಚಾರ್ಯ ಸ್ವಾಮಿಜೀ, ಬೇಬಿ ಶ್ರೀರಾಮ ಯೋಗಿಶ್ವರ ಮಠದ ಅಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ, ಎಲೆರಾಮಪುರ ಕುಂಚಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ, ಶ್ರವಣಬೆಳಗೊಳ ಶ್ರೀ ಚೌಡೇಶ್ವರಿದೇವಿ ಮಹಾಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಬಸವೇಶ್ವರ ಚೈತನ್ಯ ಸ್ವಾಮೀಜಿ, ಅಮೃತೂರು ವೇದವ್ಯಾಸ ಮಠದ ಅಧ್ಯಕ್ಷ ಶ್ರೀ ಬಸವನಂದ ಸ್ವಾಮೀಜಿ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳ ಪುತ್ಥಳಿಗೆ ವಿವಿಧ ಬಗೆಯ ಅಭಿಷೇಕ, ಹೋಮ, ಹವನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಭೂಮಿ ಕಬಳಿಸಿ, ಬಿಜೆಪಿ ಮುಖಂಡನಿಂದ ಅಕ್ರಮ ಮಾರಾಟ: ಮಹಾವೀರ್ ಆರೋಪ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಡಿಹೊಳೆ ಅಶೋಕ್, ಕಸಪಾ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್, ಪುರಸಭೆ ಮಾಜಿ ಸದಸ್ಯ ಕೆ ಆರ್ ನೀಲಕಂಠ, ಹಿರಿಯ ಮುಖಂಡ ಬಂಡಿಹೊಳೆ ರಾಮೇಗೌಡ, ನಾಟನಹಳ್ಳಿ ನಿಂಗೇಗೌಡ, ಪ್ರತಾಪ್, ಗಂಜಿಗೆರೆ ಮಹೇಶ್, ಶೀಳನೆರೆ ಅಜಯ್ ಸೇರಿದಂತೆ ಇತರರು ಇದ್ದರು.