‘ಸಕ್ಕರೆ ನಗರಿ’ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ನುಡಿ ಜಾತ್ರೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ವರ್ಣರಂಜಿತವಾಗಿರಲಿ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷರು ಹಾಗೂ ಶಾಸಕ ಮಧು ಜಿ ಮಾದೇಗೌಡ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮೆರವಣಿಗೆ ಸಮಿತಿ’ ಸಭೆಯಲ್ಲಿ ಮಾತನಾಡಿ, “ಸಮ್ಮೇಳನಾಧ್ಯಕ್ಷರಿಗೆ ತೋರುವ ಗೌರವ ಕನ್ನಡ ನಾಡು-ನುಡಿ ಸಾಹಿತ್ಯಕ್ಕೆ ಸಲ್ಲಿಸಿದಂತೆ. ಹಾಗಾಗಿ, ಮೆರವಣಿಗೆಯನ್ನು ಸಾಂಗವಾಗಿ, ಅರ್ಥಪೂರ್ಣ, ಆಕರ್ಷಕ ಮತ್ತು ವೈಭವಯುತವಾಗಿ ನಡೆಸಬೇಕು. ಮೆರವಣಿಗೆಯ ಗೆಲುವೇ ಸಮ್ಮೇಳನದ ಗೆಲುವು” ಎಂದು ಹೇಳಿದರು.
“ದಸರಾ ಮಾದರಿಯಲ್ಲಿ ಕನ್ನಡತನ ಸಾರುವ, ನಾಡು, ನುಡಿ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಹಾಗೂ ಕಲಾ ತಂಡಗಳು ಭಾಗವಹಿಸಲಿವೆ. ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಮುಂದೆಯಿಂದ ಶುರುವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕನ್ನಡ ಮಯವಾಗಿರಲಿದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಕನ್ನಡ ಬಾವುಟಗಳಿಂದ ಸಿಂಗಾರ ಮಾಡಲಾಗುವುದು. ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆ, ಗಡಿನಾಡು ಹಾಗೂ ಹೊರ ನಾಡುಗಳ ಕಲಾತಂಡಗಳು, ಸ್ಕೌಟ್ಸ್, ಎನ್‌ಎಸ್‌ಎಸ್, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು” ಎಂದು ಶಾಸಕ ಮಧು ಜಿ ಮಾದೇಗೌಡ ಹೇಳಿದರು.
“ಸಾಹಿತ್ಯ ಸಮ್ಮೇಳನದ ಮೆರವಣಿಗೆ ದಸರಾ ಮಾದರಿಯಲ್ಲಿ ಇರಬೇಕು. ಇವುಗಳು ಪ್ರತಿ ತಾಲೂಕುಗಳ ನುಡಿ ಸಂಸ್ಕೃತಿ, ಶಿಲ್ಪಕಲೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಬೇಕು. ಮೆರವಣಿಗೆ 6 ಕಿಮೀ ಕ್ರಮಿಸಬೇಕಿದೆ. ಹಾಗಾಗಿ, ಮೂರು ತಂಡಗಳನ್ನಾಗಿ ವಿಭಾಗಿಸಬೇಕು. ನಿರ್ದಿಷ್ಟ ದೂರ ಕ್ರಮಿಸದ ನಂತರ ಬೇರೊಂದು ಪೂರ್ಣಕುಂಭ ತಂಡ ಮೆರವಣಿಗೆ ಸೇರುವಂತೆ ಏರ್ಪಾಡು ಮಾಡಬೇಕು. ಪ್ಲಾಸ್ಟಿಕ್ ಮುಕ್ತ ಮೆರವಣಿಗೆ ಮಾಡುವ ಮೂಲಕ ಪರಿಸರ ಸ್ನೇಹಿ ಸಂದೇಶವನ್ನು ತಲುಪಿಸುವಂತಾಗಬೇಕು” ಎಂಬ ಸಲಹೆ ವ್ಯಕ್ತವಾಯಿತು.
ಸಮಿತಿಯ ಉಪಾಧ್ಯಕ್ಷ ಡಿ ಪಿ ಸ್ವಾಮಿ ಮಾತನಾಡಿ, “ಎಲ್ಲ ಜಿಲ್ಲೆಗಳಿಂದ, ಗಡಿನಾಡುಗಳಿಂದ ಪ್ರತಿನಿಧಿಕವಾಗಿ ಒಂದು ಉತ್ತಮ ಕಲಾತಂಡಗಳು ಇರಬೇಕು. 87 ಎತ್ತಿನಗಾಡಿಗಳಲ್ಲಿ 87ನೇ ಸಮ್ಮೇಳನಾಧ್ಯಕ್ಷರ ಭಾವಚಿತ್ರವನ್ನು ಮೆರವಣಿಗೆ ಮಾಡಬೇಕು” ಎಂದರು.
ಸಮಿತಿಯ ಸದಸ್ಯ ವೆಂಕಟಗಿರಿಯಯ್ಯ ಮಾತನಾಡಿ, “ಸಮ್ಮೇಳನದ ದಿನವೇ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಬೇಕು. ಮೆರವಣಿಗೆ ವೈಭವಯುತವಾಗಿ ಇರಬೇಕು. ಮುಖ್ಯ ವೇದಿಕೆಗೆ ಮೆರವಣಿಗೆ ಸುಮಾರು 11 ಗಂಟೆ ವೇಳೆಗೆ ತಲುಪುವಂತೆ ಮೆರವಣಿಗೆ ಆರಂಭದ ಸಮಯವನ್ನು ನಿಗದಿಪಡಿಸುವುದು ಸೂಕ್ತ. ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೆನಪಿಸುವಂತಹ ಸ್ತಬ್ಧಚಿತ್ರವಿರುವುದು ಸೂಕ್ತ” ಎಂದು ಹೇಳಿದರು.
ಡಿ ದೇವರಾಜ ಅರಸು ಸಂಘಟನೆಯ ಸಂದೇಶ್ ಮಾತನಾಡಿ, “ಮೆರವಣಿಗೆಯು ನಗರದಲ್ಲಿ ಸಾಂಸ್ಕೃತಿಕ ವಾತಾವರಣ, ಕನ್ನಡದ ವಾತಾವರಣವನ್ನು ನಿರ್ಮಿಸುವಂತಿರಬೇಕು. ಮೆರವಣಿಗೆ ವೈಭಯುತವಾಗಿ ಇರಬೇಕು. ಕನ್ನಡ ರಥ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಚರಿಸುವ ಮೂಲಕ ಪ್ರಚಾರ ನಡೆಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ದಬ್ಬಾಳಿಕೆಗೆ ಒಳಗಾದ ಮಹಿಳೆಯರು ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನೆರವು: ಜಿಲ್ಲಾಧಿಕಾರಿ ಯಂಶವತ್ ವಿ ಗುರುಕರ್
ಸಭೆಯಲ್ಲಿ ಕಲಾತಂಡಗಳ ಆಯ್ಕೆ ಸಮಿತಿ, ಸ್ತಬ್ಧಚಿತ್ರ ಆಯ್ಕೆ ಉಪಸಮಿತಿ, ಪೂರ್ಣಕುಂಭ ಉಪಸಮಿತಿ, ದೈಹಿಕ ಶಿಕ್ಷಣ ಶಿಕ್ಷರ ಉಪಸಮಿತಿ, ಶಾಲೆ-ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವ ಉಪಸಮಿತಿ ಸೇರಿದಂತೆ ಐದು ಉಪಸಮಿತಿಗಳ ರಚನೆಗೆ ತೀರ್ಮಾನಿಸಲಾಯಿತು.
ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷ ಮೀರಾ ಶಿವಲಿಂಗಯ್ಯ, ಕಾರಸವಾಡಿ ಮಹದೇವು, ಸಮಿತಿಯ ಸದಸ್ಯ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಜಯ ಕರ್ನಾಟಕ ಸಂಘಟನೆಯ ಪರಿಷತ್ತಿನ ನಾರಾಯಣ್, ಕನ್ನಡ ಸೇನೆ ಮಂಜುನಾಥ್, ಜಿಲ್ಲಾ ಕಸಾಪದ ಹುಸ್ಕೂರು ಕೃಷ್ಣೇಗೌಡ, ಹರ್ಷ, ಅಪ್ಪಾಜಪ್ಪ ಹಾಗೂ ಕೀಲಾರ ಕೃಷ್ಣೇಗೌಡ, ಯೋಗಣ್ಣ, ನಾಗಮ್ಮ, ಕುಬೇರಪ್ಪ ಸೇರಿದಂತೆ ಹಲವರು ಹಾಜರಿದ್ದರು.
