ಕೃಷಿ ಎಲ್ಲರಿಗೂ ಸಮರ್ಪಕವಾಗಿ ಉದ್ಯೋಗ ಕೊಡುವಲ್ಲಿ ಯಶಸ್ವಿಯಾಗಿದೆ. ಕೃಷಿಯೇ ಇಂದಿನ, ಮುಂದಿನ ಪೀಳಿಗೆಗಳ ಭವಿಷ್ಯ ಎಂದು ಕೃಷಿ ತಜ್ಞೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಕವಿತಾ ಕುರುಗಂಟಿ ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಕೆ ವಿ ಶಂಕರೇಗೌಡ ಸಭಾಂಗಣದಲ್ಲಿ ನಡೆದ, ʼಗ್ರಾಮೀಣ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯʼ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಸುಸ್ಥಿರವಾದ ಕೃಷಿ ಭೂಮಿಯನ್ನು ಹೊಂದುವುದು ಮುಖ್ಯ. ಸುಸ್ಥಿರ ಭೂಮಿಯನ್ನು ಹೊಂದುವ ಬಗ್ಗೆ ಗಮನ ಹರಿಸಬೇಕು. ಆದರೆ, ರಾಜ್ಯ ಸರ್ಕಾರ ಮಾಡುತ್ತಿರುವ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತರು ಸುಸ್ಥಿರ ಕೃಷಿ ಭೂಮಿಯನ್ನು ಕಾಪಾಡಿಕೊಳ್ಳಬೇಕು” ಎಂದರು.
ಈ ನಿಟ್ಟಿನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಪ್ರತಿ ಜಿಲ್ಲೆಗಳಲ್ಲಿ ಅವಶ್ಯಕತೆ ಇರುವಂತಹ ಪ್ರಜಾತಾಂತ್ರಿಕ ವ್ಯವಸ್ಥೆಯ ಕುರಿತು ಸಾಮಾನ್ಯರಿಗೆ ಪೂರಕವಾದ ಅರಿವು ಮೂಡಿಸುತ್ತಿದೆ. ಕೆಲವು ಕಡೆಗಳಲ್ಲಿ ರಾಜ್ಯ ಸರ್ಕಾರಗಳು ಸ್ಥಳೀಯ ಪ್ರಜಾ ತಾಂತ್ರಿಕತೆಯ ವಿರುದ್ಧವಾಗಿ ಕೆಲಸ ಮಾಡುತ್ತಿವೆ. ವಿವಿಧ ಕ್ಷೇತ್ರಗಳ ವಿರುದ್ಧವಾಗಿದೆ. ಅದರ ಬದಲಿಗೆ ಕೃಷಿ ಅಭಿವೃದ್ಧಿಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ವೈಜ್ಞಾನಿಕವಾಗಿ ಸ್ಟಡಿ ಮಾಡಿ ಕೃಷಿ ವಿಚಾರವಾಗಿ ಮುಂದಾಲೋಚನ ಯೋಜನೆಗಳನ್ನು ಜಾರಿಗೆ ತರಬೇಕು. ಜನ ಸಾಮಾನ್ಯರೂ ಸಹ ಕೃಷಿ ಪ್ರಧಾನವಾದ ಯೋಜನೆಗಳ ಕುರಿತ ಪ್ರಜ್ಞಾಪೂರಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ಸ್ಥಳೀಯ ಸಮಸ್ಯೆಗಳ ಹಾಗೂ ಸ್ಥಳೀಯ ಅವಕಾಶಗಳ ಬಗ್ಗೆ ಸೂಕ್ತ, ನಿರ್ಧಿಷ್ಟ ಮಾಹಿತಿ ದೊರೆಯುತ್ತದೆ. ಆ ನಿಟ್ಟಿನಲ್ಲಿ ಜಾಗೃತ ಕರ್ನಾಟಕ ಕಾರ್ಯಪ್ರವೃತ್ತವಾಗಿದೆ. ಈ ಕೆಲಸವನ್ನು ಸರ್ಕಾರ ಮಾಡಿದರೆ ಜಿಲ್ಲಾವಾರು ಸದೃಢ ಹಾಗೂ ಸುಸ್ಥಿರ ಕೃಷಿ ಪ್ರಧಾನ ಜಿಲ್ಲೆ ನಿರ್ಮಾಣ ಮಾಡಿ ಆರ್ಥಿಕವಾಗಿ ಸದೃಢ ಮಾಡಲು ಸಹಕಾರಿಯಾಗುತ್ತದೆ. ರೈತರು ಹಾಗೂ ನಾಗರಿಕರು ನೀಡುವ ಮಾಹಿತಿಯನ್ನು ಕೈಪಿಡಿಯನ್ನಾಗಿ ಪರಿಗಣಿಸಬೇಕು. ರಾಜ್ಯದ ಜನಸಂಖ್ಯೆ ಸರಾಸರಿಯಲ್ಲಿ ಶೇಕಡಾ 38.57 ನಗರ ಪ್ರದೇಶ ಹಾಗೂ ಶೇಕಡಾ 61.43 ರಷ್ಟು ಗ್ರಾಮೀಣ ಪ್ರದೇಶವಿದೆ. ಇನ್ನು ಮಂಡ್ಯದಲ್ಲಿ ಶೇಕಡಾ 17.08 ರಷ್ಟು ನಗರ ಪ್ರದೇಶ, ಶೇಕಡಾ 82.92 ರಷ್ಟು ಗ್ರಾಮೀಣ ಪ್ರದೇಶವಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಗರೀಕರಣ ತುಂಬಾ ಕಡಿಮೆ ಇದೆ. ಆದರೆ ನಗರೀಕರಣವಾದರೆ ಮಾತ್ರ ಅಭಿವೃದ್ಧಿಯಲ್ಲ. ಒಂದು ವೇಳೆ ನಗರೀಕರಣವಾದರೆ ಯಾವ ರೀತಿಯಲ್ಲಿ ಆಗಬೇಕು ಎಂಬುದು ಬಹು ಮುಖ್ಯವಾದ ಅಂಶ” ಎಂದರು.
“ಮಂಡ್ಯದಲ್ಲಿ ಶೇಕಡಾ 67ರಷ್ಟು ಮಾತ್ರ ನೀರಾವರಿ ಪ್ರದೇಶವಿದೆ. ಭಾರತದಾದ್ಯಂತ ಅತಿ ಹೆಚ್ಚು ನೀರಾವರಿ ಹೊಂದಿರುವುದು ಮಂಡ್ಯ ಜಿಲ್ಲೆ ಮಾತ್ರ. ಮಂಡ್ಯ ನೀರಾವರಿ ವಿಚಾರದಲ್ಲಿ ಚರ್ಚೆಗೆ ಬರುವುದು ಕೇವಲ ಕಾವೇರಿ ವಿಷಯ ಬಂದಾಗ ಮಾತ್ರ. ನೀರು ಸಮಸ್ಯೆಯಿಂದಲ್ಲ. ಇನ್ನು ಕೃಷಿ ಮಾಡುವ ಜಮೀನನ್ನು ಬಂಜರು ಭೂಮಿಯಾಗಿ ಬಿಡುವುದು ಹಾಗೂ ಶೇಕಡಾ 13ರಷ್ಟು ಕೃಷಿ ಮಾಡಬಹುದಾದ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವುದು ಕೃಷಿಯಲ್ಲಿ ಹಿಂದುಳಿಯಲು ಕಾರಣವಾಗಿದೆ. ಮಂಡ್ಯ 2015ರಿಂದ ವ್ಯಕ್ತಿಗತ ಆದಾಯ 24 ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಂಡ್ಯ ಜಿಲ್ಲೆಗೆ ಮುಂದಿದೆ, ಇನ್ನು ಒಟ್ಟು ದೇಶೀಯ ಉತ್ಪನ್ನಗಳನ್ನು ಅಭಿವೃದ್ಧಿ ಮಾನದಂಡವಾಗಿ ಮಾಡುವುದಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕ ದಲ್ಲಿಯೂ ಸಹ 6ನೇ ಸ್ಥಾನದಲ್ಲಿ, ಇದರಲ್ಲಿ ಕೃಷಿ, ಶಿಕ್ಷಣ ಆರೋಗ್ಯ ಎಲ್ಲಾ ವಿಚಾರದಲ್ಲಿಯೂ ಕೂಡ ಗ್ರಾಮೀಣ ಭಾಗವನ್ನು ಹೊಂದಿರುವ ಜಿಲ್ಲೆಯೇ ಮುಂದಿದೆ.ನಗರೀಕರಣ ರಾಜಕಾರಿಣಿಗಳ ಒಂದು ಅಸ್ತ್ರ ಅಷ್ಟೇ, ರಾಜಕೀಯ ಬಂಡವಾಳವಾಗಿ ನಗರ ಪ್ರದೇಶಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದುದರಿಂದ ನಗರೀಕರಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅದು ಶೇಕಡಾ 17 ರಷ್ಟು ಆಗುತ್ತಿದೆ. ಈ ಬಗ್ಗೆ ಗಮನ ಹರಿಸದೆ ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು” ಎಂದರು.
“ಕಿಸಾನ್ ಸ್ವರಾಜ್ ವತಿಯಿಂದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರಿಗೂ ಸರಿಯಾದ ಆದಾಯ ದೊರಕಬೇಕು. ಪರಿಸರದ ಸುಸ್ಥಿರತೆ ಕಾಪಾಡಿಕೊಂಡು ಕೃಷಿ ಮಾಡುವುದು, ರೈತರಿಗೆ ಭೂಮಿ, ಗೊಬ್ಬರ ಸೇರಿದಂತೆ ಕೃಷಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಹಕ್ಕುಗಳು ದೊರೆಯಬೇಕು. ಮಹಿಳೆಯರ ಹೆಸರಿಗೆ ಭೂಮಿ ಬದಲಾಗಬೇಕು ಎಂಬೆಲ್ಲ ಅಂಶಗಳನ್ನು ಎಲ್ಲರೂ ಪಾಲಿಸಿದರೆ ಮಾತ್ರ ಯಶಸ್ಸು ಸಾಧ್ಯ. ಅಷ್ಟೇ ಅಲ್ಲದೆ ಸರಕಾರ ರೈತರಿಗೆ ಬೇಕಾದ ಆದಾಯ ಸಿಗುವ ರೂಪದಲ್ಲಿ ಕೃಷಿ ಮಾಡಲು ಉತ್ತೇಜನ ನೀಡಬೇಕು, ರೈತರಿಂದ ನೇರ ಮಾರಾಟ ಆಗುವಂತೆ ಆಗಬೇಕು, ಬೆಳೆ ಬೆಳೆಯುವ ಖರ್ಚು ಕಡಿಮೆ ಆಗಬೇಕು, ಹೆಚ್ಚುವರಿ ಖರ್ಚು ಕಡಿಮೆಯಾಗಬೇಕು, ರೈತರ ಆತ್ಮಹತ್ಯೆಗಳು ಕಡಿಮೆಯಾಗಬೇಕು. ಇದನ್ನು ಬದಲಾವಣೆ ಮಾಡುವುದು ಸರ್ಕಾರ, ಸಮಾಜ ಹಾಗೂ ಮಾರುಕಟ್ಟೆ ಇವು ಮೂರು ಈ ಕಾರ್ಯವನ್ನು ಮಾಡಿ ರೈತರನ್ನು ಹಾಗೂ ಕೃಷಿಯನ್ನು ಉಳಿಸಿ ಬೆಳೆಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯ | ರಾಜ್ಯಾದ್ಯಂತ ಸಹಿ ಸಂಗ್ರಹ; ವಕೀಲರ ನಿಯೋಗದಿಂದ ಬೇಡಿಕೆ ಈಡೇರಿಸುವಂತೆ ಮನವಿ
ಕೃಷಿಯೇ ನಮ್ಮ ಭವಿಷ್ಯ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಸ್ಮಾರ್ಟ್ ಸಿಟಿಗಳು ನಮಗೆ ಬೇಡ. ವಿವೇಕವುಳ್ಳ ಗ್ರಾಮಗಳು ನಮಗೆ ಬೇಕಾಗಿವೆ. ಕೃಷಿಗೆ ಸಂಬಂಧಿಸಿದ ಗುಡಿ ಕೈಗಾರಿಕೆಗಳು ಹೆಚ್ಚು ಮಾಡಬೇಕು. ಇದರ ಜೊತೆಗೆ ಪ್ರವಾಸೋದ್ಯಮಕ್ಕೂ ಕೂಡ ಆದ್ಯತೆ ನೀಡಬೇಕು. ಇದಕ್ಕೆ ಸರಕಾರ ಸ್ಪಂದಿಸುವಂತಾಗಬೇಕು. ಮಂಡ್ಯ ಜಿಲ್ಲೆಯಲ್ಲಿ ಭತ್ತದ ರಫ್ತು ಹೆಚ್ಚಾಗಿದ್ದು, ಇದರ ಸದುಪಯೋಗ ಪಡೆದು ಕೊಳ್ಳಬೇಕು. ಸರ್ಕಾರದ ಮಟ್ಟದಲ್ಲಿ ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ಪಾಲಿಸಿಗಳು ಬದಲಾಗಬೇಕು, ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು. ಇನ್ನು ಎಂ.ಎಸ್.ಪಿ ವಿಚಾರವಾಗಿ ಸರಕಾರದ ಮಟ್ಟದಲ್ಲಿ ಮಾರ್ಪಾಡುಗಳು ರೈತರ ಪರವಾಗಿ ಬರಬೇಕು” ಎಂದು ತಿಳಿಸಿದರು.
ವಿಚಾರ ಗೋಷ್ಠಿಯಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಿ.ಸಂತೋಷ್ ಮಾತನಾಡಿ, “ವಿಚಾರಗೋಷ್ಠಿ ಒಂದು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು, ಪ್ರತಿ ತಾಲೂಕಿನಲ್ಲಿಯೂ ಸಹ ನೆಡೆಯಬೇಕು. ಕೃಷಿ ವಿಚಾರವಾಗಿ ಅಸಡ್ಡೆ ಬಿಡಬೇಕು. ಸಹಜ ಕೃಷಿ, ನೈಸರ್ಗಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ನೈಸರ್ಗಿಕ ಕೃಷಿ ಮಾಡಿದ್ದಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಕೂಡ ಅವಕಾಶ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತಾಗಬೇಕು. ಸಮುದಾಯ ಹಾಗೂ ಸಂಘಟನೆಗಳ ಪಾಲ್ಗೊಳ್ಳುವಿಕೆಯಿಂದ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಾಗೃತರಾಗಬೇಕು” ಎಂದರು.
ಈ ವೇಳೆ ಗೋಷ್ಠಿಯ ನಿರ್ವಹಣೆ ಮಾಡಿಕೊಟ್ಟ ನಾಗೇಶ್ ಹಾಗೂ ಜಾಗೃತ ಕರ್ನಾಟಕದ ಸದಸ್ಯೆ ಸೀತಾ ಲಕ್ಷ್ಮೀ ಉಪಸ್ಥಿತರಿದ್ದರು.