21 ವರ್ಷಗಳ ಹಿಂದೆ ಪಿಯು ವ್ಯಾಸಂಗವನ್ನು ಅರ್ಧಕ್ಕೆ ಕಡಿತಗೊಳಿಸಿದ್ದ ಅಂಗನವಾಡಿ ಶಿಕ್ಷಕಿಯೊಬ್ಬರು ಇದೀಗ ಪಿಯುಸಿ ಪರೀಕ್ಷೆ ಬರೆದು, ಪಾಸ್ ಆಗಿದ್ದಾರೆ. ಆ ಮೂಲಕ ಶಿಕ್ಷಣವನ್ನು ಅರ್ಧಕ್ಕೆ ಕಡಿತಗೊಳಿಸಿದ್ದ ಹಲವಾರು ಮಹಿಳೆಯರು ಮತ್ತೆ ಪರೀಕ್ಷೆ ಬರೆಯಲು ಪ್ರೇರಣೆಯಾಗಿದ್ದಾರೆ. ಮಾತ್ರವಲ್ಲದೆ, ತಾವು ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡಲು ಮುಂದಾಗಿದೆ.
ಮಂಡ್ಯ ಜಿಲ್ಲೆಯ ಡಣಾಯಕನಪುರ ಗ್ರಾಮದ ಅಂಗನವಾಡಿ ಶಿಕ್ಷಕಿ ಡಿ ಉಷಾ ಅವರು ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಅವರು 2004ರಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆದರೆ, ಅವರಿಗೆ ಪೋಷಕರು ವಿವಾಹ ನಿಶ್ಚಯ ಮಾಡಿ, ಪಿಯುಸಿ ಪರೀಕ್ಷೆಗೆ ಒಂದು ತಿಂಗಳಿರುವಾಗಲೇ ಅವರನ್ನು ಕಾಲೇಜು ಬಿಡಿಸಿದ್ದರು. ಮದುವೆ ಮಾಡಿದ್ದರು. ಹೀಗಾಗಿ, ಅವರು ಪಿಯುಸಿ ಪರೀಕ್ಷೆ ಬರೆಯಲು ಆಗಿರಲಿಲ್ಲ ಎಂದು ತಿಳಿದುಬಂದಿದೆ.
ಮದುವೆಯ ಬಳಿಕ, 2007ರಲ್ಲಿ ಅವರು ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಸೇರಿದರು. ನಾಲ್ಕು ವರ್ಷಗಳ ಹಿಂದೆ ಅಜೀಂ ಪ್ರೇಮ್‌ಜೀ ಫೌಂಡೇಷನ್ ನೀಡಿದ ತರಬೇತಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಕಾರ್ಯಗಾರದಲ್ಲಿ ನೀಡಲಾದ ತರಬೇತಿಯಿಂದ ಪ್ರೇರಣೆಗೊಂಡ ಉಷಾ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ನಿರ್ಧರಿಸಿದ್ದರು.
ಈ ವರ್ಷ ಪರೀಕ್ಷೆ ಕಟ್ಟಿದ್ದ ಪರೀಕ್ಷೆ ಬರೆದು, ಒಟ್ಟು 600 ಅಂಕಗಳಲ್ಲಿ 341 ಅಂಕಗಳನ್ನು ಗಳಿಸಿದ್ದಾರೆ. ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರು ಕನ್ನಡ – 83, ಇಂಗ್ಲಿಷ್ – 43, ಇತಿಹಾಸ – 72, ಅರ್ಥಶಾಸ್ತ್ರ – 43, ಸಮಾಜಶಾಸ್ತ್ರ – 50 ಹಾಗೂ ರಾಜಶಾಸ್ತ್ರದಲ್ಲಿ 50 ಅಂಕಗಳನ್ನು ಪಡೆದಿದ್ದಾರೆ.
ತಮ್ಮ ಶಿಕ್ಷಣವನ್ನು ಮುಂದುವರೆಸಿರುವುದು ಮಾತ್ರವಲ್ಲದೆ, ಅವರು ಅಂಗನವಾಡಿಯ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ. ತಮಗೆ ಬರುವ ಕಡಿಮೆ ಗೌರವಧನದ ಹಣವನ್ನೂ ಸಂಗ್ರಹಿಸಿಟ್ಟು, ಅದೇ ಹಣದಲ್ಲಿ ಅಂಗನವಾಡಿಗೆ ಬಣ್ಣ ಬಳಿದಿದ್ದಾರೆ. ಮಾತ್ರವಲ್ಲದೆ, ಅಂಗನವಾಡಿ ಗೋಡೆಗಳಿಗೆ ಆಕರ್ಷಣೀಯ ಚಿತ್ರಗಳನ್ನೂ ಬಿಡಿಸಿದ್ದಾರೆ.