ಪರಿಶಿಷ್ಟ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವಂತೆ ಆಗ್ರಹಿಸಿ ಭೀಮಸೇನೆ ಕರ್ನಾಟಕ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆಯನ್ನು ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಮನವಿ ಸಲ್ಲಿಸಿದರು.
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರನ್ನು ಅಮಾನುಷವಾಗಿ ನಡೆಸಿಕೊಂಡು ಮತ್ತು ಅವರ ಸಂವಿಧಾನಬದ್ದ ಹಕ್ಕುಗಳನ್ನು ನಿರಾಕರಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ(ಅಟ್ರಾಸಿಟಿ) ಕಾಯ್ದೆಯಡಿ ದೂರು ದಾಖಲಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಕಬ್ಬನಹಳ್ಳಿ ಗ್ರಾಮದಲ್ಲಿ, ಪರಿಶಿಷ್ಟ ಜನತೆಗೆ ಕಾನೂನುಬದ್ಧವಾಗಿ ಮೀಸಲಿರಿಸಿದ ಏಳು ಎಕರೆ ಗರೀಬಿ ಸೈಟನ್ನು ಸ್ಥಳೀಯರು ದಬ್ಬಾಳಿಕೆ ಮೂಲಕ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಿ, ಪರಿಶಿಷ್ಟ ಜನತೆಗೆ ನ್ಯಾಯ ದೊರಕಿಸಬೇಕು. ಜತೆಗೆ ಆ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಕಾಯ್ದಿರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಜಯಪುರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಜನರು ಓಡಾಡುವ ರಸ್ತೆಗೆ ತಡೆಗೋಡೆ ನಿರ್ಮಿಸಿರುವುದು ಕಾನೂನುಬಾಹಿರ. ತಕ್ಷಣವೇ ಈ ತಡೆಗೋಡೆ ತೆರವುಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕು. ಮಳೆಯಿಂದ ಕುಸಿದ ಮನೆಗಳ ಮಾಲೀಕರಿಗೆ ಸರಿಯಾದ ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಕನಕಪುರ ತಾಲೂಕು ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳಿಗೆ ಕೊಠಡಿ ನೀಡುವಂತೆ ಹೋರಾಟಗಾರರ ಒತ್ತಾಯ
“ಸೀತಾಪುರ ಗ್ರಾಮದಲ್ಲಿ ವಾಸಿಸುತ್ತಿರುವ ವಾಲ್ಮೀಕಿ ಸಮುದಾಯದ ಜನರಿಗೆ, ಸರ್ಕಾರದ ನಿಯಮಾವಳಿಗಳಂತೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದೆ ವಂಚಿಸುತ್ತಿರುವ ತಾಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪರಿಶಿಷ್ಟರು ವಾಸಿಸುವ ಗ್ರಾಮಗಳಲ್ಲಿ ಸ್ಮಶಾನವನ್ನು ಕಾಯ್ದಿರಿಸಲು ತಹಶೀಲ್ದಾರರಿಗೆ ಆದೇಶ ನೀಡಬೇಕು” ಎಂದು ಆಗ್ರಹಿಸಿದರು.
ಈ ಪ್ರತಿಭಟನೆಗೆ ಭೀಮಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಪ್ರಸನ್ನ ಜೆ ಲವ ಕೆ ಎಚ್, ಸುಂದರಿ, ಸುನಿಲ್ ಕೆ ಸಿ, ಮಹೇಶ್ ಕೆ ಪಿ, ಕುಳ್ಳ ನಿಂಗಯ್ಯ, ಪ್ರವೀಣ್ ಕೆ ಎಸ್ ಇದ್ದರು.